‘ಮಹಾ’ಧಿಪತಿಗಾಗಿ ಗರಿಗೆದರಿದ ರಾಜಕೀಯ ಲೆಕ್ಕಾಚಾರಗಳು..!

ಮುಂಬೈ: ನಿನ್ನೆ ಹೊರಬಿದ್ದ ಬಹು ನಿರೀಕ್ಷಿತ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ, ಕೇಸರಿ-ಸೇನೆ ಮೈತ್ರಿ ಭಾರೀ ಮುನ್ನಡೆ ಸಾಧಿಸಿವೆ. ಒಟ್ಟು 288 ಕ್ಷೇತ್ರಗಳ ಪೈಕಿ ಬಿಜೆಪಿ 105 ಕ್ಷೇತ್ರಗಳಲ್ಲಿ ಬಾಹುಬಲಿಯಾಗಿ ಹೊರಹೊಮ್ಮಿದ್ರೆ, ಶಿವಸೇನೆ 56 ಸೀಟ್​ಗಳನ್ನ ಗೆಲ್ಲುವ ಮೂಲಕ 2ನೇ ಅತೀ ದೊಡ್ಡ ಪಕ್ಷವಾಗಿ ಬೀಗಿದೆ. ಇನ್ನು ಕಾಂಗ್ರೆಸ್​ 44 ಹಾಗೂ ಎನ್​ಸಿಪಿ 54 ಕ್ಷೇತ್ರಗಳಿಗೆ ತೃಪ್ತಿ ಪಟ್ಟುಕೊಂಡಿವೆ. 29 ಕ್ಷೇತ್ರಗಳಲ್ಲಿ ಇತರೆ ಪಕ್ಷಗಳು ಗೆಲುವಿನ ಕೇಕೆ ಹಾಕಿವೆ.

ಸರ್ಕಾರ ರಚನೆಗೆ ಬೇಕಾಗಿರುವ ಮ್ಯಾಜಿಕ್​ ನಂಬರ್​​ 145. ಕಾಂಗ್ರೆಸ್​ ಹಾಗೂ ಎನ್​ಸಿಪಿ ಮೈತ್ರಿಯಾಗಿ ಚುನಾವಣೆ ಎದುರಿಸಿದ್ರೂ, ಗೆದ್ದಿರುವ ಒಟ್ಟು ಕ್ಷೇತ್ರಗಳು 98. ಹೀಗಾಗಿ ಸರ್ಕಾರ ರಚನೆ, ಕಾಂಗ್ರೆಸ್​ಗೆ ಕನಸೇ ಸರಿ. ಹೀಗಾಗಿ ಬಹುಮತ ಪಡೆದಿರುವ ಬಿಜೆಪಿ ಹಾಗೂ ಶಿವಸೇನೆ ಮೈತ್ರಿಯ ಸರ್ಕಾರ ರಚನೆ ಪಕ್ಕಾ ಆಗಿದೆ. ಆದ್ರೆ, ಈವರೆಗೂ ಯಾವ ನಾಯಕರೂ ಸರ್ಕಾರ ರಚನೆ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.

ಮತ್ತೊಂದ್ಕಡೆ, ಶಿವಸೇನೆ ಮುಖ್ಯಸ್ಥ ಉದ್ಧವ್​ ಠಾಕ್ರೆ, ಸಿಎಂ ದೇವೇಂದ್ರ ಫಡ್ನವಿಸ್​​ ಎದುರು ಹೊಸ ಸರ್ಕಾರ ರಚನೆಗೆ 50-50 ಅಧಿಕಾರ ಹಂಚಿಕೆ ವಿಚಾರ ಮುಂದಿಟ್ಟಿದ್ದಾರೆ. ಅಂದ್ರೆ, ಶಿವಸೇನೆ ಸಿಎಂ ಹುದ್ದೆ ಮೇಲೂ ಕಣ್ಣಿಟ್ಟಿದೆ ಅನ್ನೋದನ್ನ ಉದ್ಧವ್​ ಠಾಕ್ರೆ ಪರೋಕ್ಷವಾಗಿ ಹೊರಹಾಕಿದ್ದಾರೆ. ಆದ್ರೆ, ಹೈ ಕಮಾಂಡ್​ ಸಿಗ್ನಲ್​ ಸಿಗದ ಹೊರತು, ಫಡ್ನವಿಸ್​ ಯಾವುದೇ ಪ್ರತಿಕ್ರಿಯೆ ನೀಡದಿರಲು ನಿರ್ಧರಿಸಿದ್ದಾರೆ.

ಇದೇ ವೇಳೆ ಉದ್ಧವ್​ ಠಾಕ್ರೆ ಶನಿವಾರ ತಮ್ಮ ನೂತನ ಶಾಸಕರ ಜೊತೆ ಮಹತ್ವದ ಮೀಟಿಂಗ್​ ಕರೆದಿದ್ದಾರೆ. ಈ ಸಭೆಯಲ್ಲಿ ಹೊಸ ಸರ್ಕಾರ ರಚನೆ, ತಮ್ಮ ಬೇಡಿಕೆ ಹಾಗೂ ಇತರೆ ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಬಳಿಕ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.
ಇತ್ತ ಬಿಜೆಪಿ ಕೂಡ ಶೀಘ್ರ ಹೊಸ ಸರ್ಕಾರ ಫಾರ್ಮ್​ ಮಾಡಲು ಮುಂದಾಗಿದೆ. ಮೈತ್ರಿ ಹಾಗೂ ಶಿವಸೇನೆ ಬೇಡಿಕೆ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಂತಿಮವಾಗಿ ನಿರ್ಧರಿಸಲಿದ್ದಾರೆ. ಈ ಬಗ್ಗೆ ಬಿಜೆಪಿ ಸಂಸದೀಯ ಮಂಡಳಿ ಅಮಿತ್ ಶಾ ಅವರಿಗೇ ಅಧಿಕಾರ ನೀಡಿದ್ದು, ಇಂದೇ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆಗಳೂ ಇವೆ.

ಇದೆಲ್ಲದರ ಮಧ್ಯೆ ಸಿಎಂ ಫಡ್ನವಿಸ್​, 15 ಜನ ಸ್ವತಂತ್ರ ಶಾಸಕರು ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದಾರೆಂಬ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಮಹಾರಾಷ್ಟ್ರದಲ್ಲಿ ಮತ್ತೊಮ್ಮೆ ದೇವೇಂದ್ರನೇ ಮಹಾಧಿಪತಿ ಆಗಲಿದ್ದಾರೆಂಬ ಮಾತುಗಳು, ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ. ಇದರ ಮಧ್ಯೆ ಶಿವಸೇನೆ ಸಿಎಂ, ಡಿಸಿಎಂ ಸೇರಿದಂತೆ ಪ್ರಮುಖ ಹುದ್ದೆಗಳಿಗೆ ಬೇಡಿಕೆ ಇಟ್ಟರೂ ಅಚ್ಚರಿ ಇಲ್ಲ.

About the author

Adyot

Leave a Comment