ಆದ್ಯೊತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆ ಸಿದ್ದಾಪುರದಲ್ಲಿ ಸ್ಥಳೀಯ ಪೌರ್ಣಿಮಾ ಸಾಹಿತ್ಯ ವೇದಿಕೆ ಹಾಗೂ ಪ್ರಯೋಗ ಸ್ವಯಂಸೇವಾಸಂಸ್ಥೆ ಇವರ ಸಹಯೋಗದಲ್ಲಿ ಸಾಹಿತಿ ಗಂಗಾಧರ ಕೊಳಗಿಯವರ ” ಕಾಡಂಚಿನ ಯಾನ” ಹಾಗೂ “ಮನಸು ಆಕಾಶದ ನೀಹಾರಿಕೆ” ಕೃತಿಗಳ ಅವಲೋಕನ ಕಾರ್ಯಕ್ರಮ ನಡೆಯಿತು.

ಕಾಡಂಚಿನ ಯಾನ ಕೃತಿಯನ್ನು ಅವಲೋಕಿಸಿದ
ಕ್ಷೇತ್ರಶಿಕ್ಷಣಾಧಿಕಾರಿ ಎಂ.ಹೆಚ್.ನಾಯ್ಕ ಮಾತನಾಡಿ,ಪುಸ್ತಕ ಎನ್ನುವುದು ಪ್ರತಿಯೊಬ್ಬ ಓದುಗನಲ್ಲೂ ಹೊಸ ಅರ್ಥವನ್ನು ಸೃಷ್ಟಿಸುವ ಜೀವಂತ ದ್ರವ್ಯವಾಗಿದ್ದು ಇದು ಕೇವಲ ಅಚ್ಚಾದ ವಸ್ತುವಲ್ಲ.ಮನುಷ್ಯ ನಿರ್ಮಿತವಾದ ಯಾವುದೂ ಶಾಶ್ವತವಲ್ಲದಿದ್ದರೂ, ಅವನು ಸೃಷ್ಟಿಸಿದ ಅಕ್ಷರ ಮತ್ತು ಸಾಹಿತ್ಯ ಮಾತ್ರ ಮನುಕುಲ ಇರುವವರೆಗೂ ಶಾಶ್ವತವಾಗಿರುತ್ತದೆ. ೨೦೦೩ ಮತ್ತು ೨೦೧೯ರಲ್ಲಿ ಪ್ರಕಟವಾದ ಲೇಖನಗಳ ಸಂಗ್ರಹವಾದ ಈ ಕೃತಿಯು ಲೇಖಕರ ಸಾಮಾಜಿಕ ಹೊಣೆಗಾರಿಕೆ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರವನ್ನು ನೋಡುವ ಒಳನೋಟವನ್ನು ಪರಿಚಯಿಸುತ್ತದೆ ಎಂದು ಹೇಳಿದರು.


ಬನ್ನಿಮಂಟಪದಿಂದ ಹೊಸನಗರದವರೆಗೆ ಸುಮಾರು ೭೦-೮೦ ಕಿಲೋಮೀಟರ್ ದೂರವನ್ನು ತೆಪ್ಪದಲ್ಲಿ ಕ್ರಮಿಸಿದ ಆ ಸಾಹಸಮಯ ಯಾನ,ಬೈಸಿಕಲ್ ಯಾನ, ಮಾಯಾಮೃಗ (ಕಳೆದುಹೋದ ಎಮ್ಮೆಯ ಕಥೆ), ಹಾವುಗೊಲ್ಲರ ಕರಾಮತ್ತು, ದೆವ್ವದ ಕಾಟ ಹಾಗೂ ಚೌತಿ ಮೆಣಸಿನ ಜಾಡು ಮುಂತಾದ ಲೇಖನಗಳು ಸಿದ್ದಾಪುರ ಮತ್ತು ಸುತ್ತಮುತ್ತಲ ಹಳ್ಳಿಗಳ ಮಣ್ಣಿನ ವಾಸನೆಯನ್ನು ಹೊಂದಿವೆ. ಹಳ್ಳಿಯ ಜನರ ಆಡುಭಾಷೆ, ‘ಹುಕ್ಕಿ ಹೊಡೆಯುವುದು’, ‘ಕುನ್ನಿ ಈಜು’, ‘ಬಳಕೆ ಹಚ್ಚುವುದು’ ಎಂಬತಹ ಅಪ್ಪಟ ಗ್ರಾಮೀಣ ಶಬ್ದಗಳು ಕೃತಿಯ ಓದಿನ ಆಪ್ತತೆಯನ್ನು ಹೆಚ್ಚಿಸುತ್ತವೆ ಈ ಕೃತಿಯು ಓದುಗರನ್ನು ಬೇರೊಂದು ಲೋಕಕ್ಕೇ ಕರೆದುಕೊಂಡು ಹೋಗುತ್ತದೆ. ಒಟ್ಟಾರೆಯಾಗಿ, ‘ಕಾಡಂಚಿನ ಯಾನ’ ಕೇವಲ ಪ್ರವಾಸ ಕಥನವಾಗಿ ಉಳಿಯದೆ, ನಮ್ಮ ಬದುಕಿನ ಯಾನವನ್ನು ಪ್ರತಿಬಿಂಬಿಸುವ ಒಂದು ವಾಸ್ತವ ಕನ್ನಡಿಯಾಗಿದೆ ಎಂದು ಹೇಳಿದರು.


ಮನಸು ಆಕಾಶದ ನೀಹಾರಿಕೆ ಕೃತಿಯ ಕುರಿತು ಮಾತನಾಡಿದ ಪ್ರೊ.ರತ್ನಾಕರ ನಾಯ್ಕ, “ಗಂಗಾಧರ ಕೊಳಗಿ ಅವರ ಸಾಹಿತ್ಯವು ಕೇವಲ ಸ್ಥಳೀಯತೆಗೆ ಸೀಮಿತವಾಗದೆ, ಮನುಷ್ಯನ ಮನಸ್ಸಿನ ಒಳತಲ್ಲಣಗಳನ್ನು ವೈಚಾರಿಕ ನೆಲೆಯಲ್ಲಿ ವಿಶ್ಲೇಷಿಸುವ ಶಕ್ತಿಯನ್ನು ಹೊಂದಿದೆ. ಮನಸ್ಸು, ಆಕಾಶ ಮತ್ತು ನೀಹಾರಿಕೆ ಈ ಮೂರೂ ಭೌತಿಕವಾಗಿ ಕೈಗೆ ಸಿಗದಿದ್ದರೂ ಮನುಷ್ಯನ ಮೇಲೆ ಗಾಢ ಪ್ರಭಾವ ಬೀರುವ ಅಂಶಗಳಾಗಿವೆ. ಬಾಹ್ಯಾಕಾಶದ ನೀಹಾರಿಕೆಯಂತೆ ಮನುಷ್ಯನ ಮನಸ್ಸು ಕೂಡ ಅನೇಕ ಭಾವನೆಗಳನ್ನು ಸೃಷ್ಟಿಸುವ ಮತ್ತು ಸಾಯಿಸುವ ಶಕ್ತಿಯನ್ನು ಹೊಂದಿದೆ. ಈ ಸಂಕಲನದ ಆರು ಕಥೆಗಳಲ್ಲಿ ನವ್ಯ ಸಾಹಿತ್ಯದ ಛಾಯೆ ಗಾಢವಾಗಿದ್ದು, ವ್ಯಕ್ತಿ ಕೇಂದ್ರಿತ ನೆಲೆಯಲ್ಲೇ ಕಥೆಗಳು ವಿಸ್ತರಿಸುತ್ತವೆ,” ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಕುಂಬ್ರಿಗದ್ದೆ, ಲಯನ್ಸ್ ಅಧ್ಯಕ್ಷ ರಾಘವೇಂದ್ರ ಭಟ್ಟ, ಕೃಷಿ ಅಧಿಕಾರಿ ಪ್ರಶಾಂತ ಜಿ.ಎಸ್ ಹಾಗೂ ಪ್ರಾಂಶುಪಾಲ ಎಂ.ಕೆ. ನಾಯ್ಕ ಹೊಸಳ್ಳಿ ಮಾತನಾಡಿದರು. ಕೃತಿಕಾರ ಗಂಗಾಧರ ಕೊಳಗಿ ಅನಿಸಿಕೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ರಾಘವೇಂದ್ರ ಭಟ್,ಕೃಷಿ ಅಧಿಕಾರಿ ಪ್ರಶಾಂತ ನಾಯ್ಕ,ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಗಂಗಾಧರ ಕೊಳಗಿ ದಂಪತಿಗಳನ್ನು ಸನ್ಮಾನಿಸಲಾಯಿತು.
ಅಣ್ಣಪ್ಪ ನಾಯ್ಕ ಶಿರಳಗಿ ಸ್ವಾಗತಿಸಿದರು. ಸುಧಾರಾಣಿ ನಾಯ್ಕ ನಿರೂಪಣೆ ಮಾಡಿದರು. ಗೋಪಾಲ ಕಾನಳ್ಳಿ ಭಾವಗೀತೆ ಹಾಡಿದರು.
ಪೂರ್ಣಿಮಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಗೋಪಾಲ ನಾಯ್ಕ ಭಾಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
