ಆದ್ಯೊತ್ ಸುದ್ದಿನಿಧಿ:
ಚಿರಾಯು ಕನ್ನಡ ವಾಹಿನಿ ಹಾಗೂ ಪ್ರತಿಫಲ ಫೌಂಡೇಶನ್(ರಿ) ಧಾರವಾಡ ಇವರುಗಳ ಸಹಯೋಗದಲ್ಲಿ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ೧೯-೭-೨೦೨೬ ರಂದು “ಪ್ರಥಮ ರಾಷ್ಟ್ರೀಯ ಚಿತ್ರಕಲಾ ಸಮ್ಮೇಳನ-೨೦೨೬” ನಡೆಯಲಿದ್ದು ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಏರ್ಪಡಿಸಲಾಗಿದೆ. ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು ಸಿದ್ದಾಪುರದ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟ ಅವರಿಗೆ “ರಾಷ್ಟ್ರೀಯ ಸಮಾಜ ಸೇವಾರತ್ನ ಪ್ರಶಸ್ತಿ” ಯನ್ನು ಘೋಷಿಸಲಾಗಿದೆ.

ಕೆಕ್ಕಾರ ನಾಗರಾಜ ಭಟ್ಟ ಅವರು ಕಳೆದ ಸರಿಸುಮಾರು ೪೦ ವರ್ಷಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದು ತಾಲೂಕಿನ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸುದ್ದಿ, ಲೇಖನ ಬರೆದು ಸಮಾಜದ ಕಣ್ಣು ತೆರೆಸುವ ಕಾರ್ಯ ಮಾಡಿದ್ದಾರೆ. ಸಿದ್ದಾಪುರ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತ “ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು” ಪುಸ್ತಕವನ್ನು ಪ್ರಕಟಿಸಿದ್ದು ಈ ಕೃತಿಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಪ್ರಶಂಸಾ ಪತ್ರ ಪಡೆದಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘದ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ, ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಲ್ಲದೇ ಪ್ರಸ್ತುತ ಭಾರತ ಸೇವಾದಳದ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಕರ್ತರ ಸಂಘದಿಂದ ಪ್ರತಿವರ್ಷ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ “ಗುರುಮನೆ ದತ್ತಿನಿಧಿ ಪ್ರಶಸ್ತಿ” ಪ್ರದಾನ ಮಾಡುತ್ತಿದ್ದಾರೆ. ಶ್ರೀಕ್ಷೇತ್ರ ಭುವನಗಿರಿಯಲ್ಲಿ ಮಾತೃವಂದನಾ ಸಮಿತಿಯಿಂದ “ಶ್ರೀಮಾತಾ ಅನುಗ್ರಹ” ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡುವಲ್ಲಿ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

ನಾಗರಾಜ ಭಟ್ಟರಿಗೆ ಜಿಲ್ಲಾ ಪತ್ರಿಕಾಮಂಡಳಿಯಿAದ ಜಿ.ಎಸ್.ಹೆಗಡೆ ಅಜ್ಜೀಬಳ ಪ್ರಶಸ್ತಿ, ಕೆ.ಶಾಮರಾವ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಇವರು ಸಲ್ಲಿಸಿರುವ ಸೇವೆಯನ್ನು ಅನುಲಕ್ಷಿಸಿ ವಿವಿಧ ಸಂಘಟನೆಗಳಿಂದ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
