ಸಿದ್ದಾಪುರ; ಕೋಟಿ ಸಸ್ಯ ಪಾಲಕ ಸುರೇಶ ನಾಯ್ಕರಿಗೆ ಸನ್ಮಾನ

ಆದ್ಯೊತ್ ಸುದ್ದಿನಿಧಿ
ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ಹೊಸೂರು ಶಂಕರಮಠದಲ್ಲಿ ಶಿರಸಿಯ ಜನಹಿತ ಸೇವಾ ಫೌಂಡೇಶನ್‌ವತಿಯಿಂದ ಕೋಟಿಸಸ್ಯಪಾಲಕ ಸುರೇಶ ನಾಯ್ಕ ಹದಿನಾರನೇ ಮೈಲ್‌ಕಲ್ಲು ಇವರಿಗೆ ಸನ್ಮಾನ ಹಾಗೂ ಪಂಜರಪಕ್ಷಿ ಯಕ್ಷಗಾನ ಪ್ರದರ್ಶನ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತ ಸಸ್ಯ ವಿಜ್ಞಾನಿ ಎಂ.ಬಿ.ನಾಯ್ಕ ಕಡಕೇರಿ ಮಾತನಾಡಿ, ಐದಾರು ದಶಕಗಳ ಹಿಂದೆ ಪರಿಸರದಲ್ಲಿ ಮರಗಿಡಗಳ ಜೊತೆ ಸಾಕಷ್ಟು ಪ್ರಾಣಿ, ಪಕ್ಷಿ, ಕೀಟಗಳಿದ್ದವು. ಆದರೆ ಇಂದು ಅನೇಕ ಪ್ರಭೇದಗಳು ಕಣ್ಮರೆಯಾಗಿವೆ. ಸಾವಿರಾರು ಜಾತಿಯ ನೇರಳೆ ಹಣ್ಣಿನ ಮರಗಳಿದ್ದು ಇನ್ಸುಲಿನ್ ಅಂಶವಿರುವ ಹಣ್ಣುಗಳನ್ನು ಅವು ನೀಡುತ್ತಿವೆ.ಸುರೇಶ ನಾಯ್ಕ ಕಳೆದ ೩೭ ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಈ ವರೆಗೆ ಕೋಟಿಗೂ ಮೀರಿ ಗಿಡಗಳನ್ನು ಬೆಳೆಸಿದ್ದು ಒಂದು ದಾಖಲೆ. ಇಂತವರನ್ನು ಗುರುತಿಸಿ ಸನ್ಮಾನಿಸಿದ್ದರಿಂದ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಮುಖ್ಯ ಅತಿಥಿಗಳಾಗಿದ್ದ ಡಾ.ಕೆ.ಶ್ರೀಧರ ವೈದ್ಯಮಾತನಾಡಿ, ನಮಗೆ ಮರಗಿಡಗಳಿಂದಲೇ ಆಮ್ಲಜನಕ ದೊರೆಯುತ್ತದೆ. ಮಳೆಗಾಲ ಆಗಮಿಸುತ್ತಿರುವ ಸಂದರ್ಭದಲ್ಲಿ ಕೋಟಿ ಸಸ್ಯಪಾಲಕರಿಗೆ ಸನ್ಮಾನ ನೀಡುತ್ತಿರುವುದು ಅರ್ಥಪೂರ್ಣ. ಇದು ತಾಲೂಕಿನ ಜನತೆಗೆ ಪ್ರೇರಣೆಯಾಗಿ ಪ್ರತಿಯೊಬ್ಬರೂ ಕನಿಷ್ಠ ಒಂದೊಂದು ಗಿಡವನ್ನಾದರೂ ನೆಟ್ಟು ಬೆಳೆಸುವಂತಾಗಲಿ ಎಂದರು.

ಅರಣ್ಯ ಇಲಾಖೆಯ ಅಧಿಕಾರಿ ಗುಡದಯ್ಯ, ಉದ್ಯಮಿ ಯೋಗಾನಂದ ನಾಯ್ಕ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಲಯನ್ಸ ಅಧ್ಯಕ್ಷ ರಾಘವೇಂದ್ರ ಭಟ್ಟ, ಕಲಾಪೋಷಕ ಅಶೋಕ ಹೆಗಡೆ ಹಿರೇಕೈ, ಹಾರ್ಸಿಕಟ್ಟಾ ಗ್ರಾ.ಪಂ.ಮಾಜಿ ಅಧ್ಯಕ್ಷೆ ಹನುಮಕ್ಕ ಬೋವಿ, ಕಲಾ ಸಂಘಟಕ ರವಿ ಕೊಂಡ್ಲಿ ಇತರರು ಉಪಸ್ಥಿತರಿದ್ದರು.
ಸನ್ಮಾನಿತ ಸುರೇಶ ನಾಯ್ಕ ಮಾತನಾಡಿ ನಾನು ಕೋಟಿ ಗಿಡಗಳನ್ನು ಬೆಳೆಸುವಲ್ಲಿ ಅರಣ್ಯ ಇಲಾಖೆಯ ಹಾಗೂ ನಾಗರಿಕರ ಪ್ರೋತ್ಸಾಹ ದೊರೆತಿದೆ. ಅನೇಕರು ವಿವಿಧ ರೀತಿಯ ಬೀಜಗಳನ್ನು ಕೊಟ್ಟು ಸಹಕರಿಸಿದ್ದಾರೆ. ಮುಂದೆಯೂ ನನ್ನ ಜೀವನ ಪರಿಸರ ಅಭಿವೃದ್ಧಿಗೆ ಮೀಸಲಾಗಿರುತ್ತದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ರಮೇಶ ಹೆಗಡೆ ಹಾರ್ಸಿಮನೆ ನಿರ್ವಹಿಸಿದರು. ಜನಹಿತ ಸೇವಾ ಫೌಂಡೇಶನ್ ಅಧ್ಯಕ್ಷ ಲೋಕೇಶ ಹೆಗಡೆ ವಂದಿಸಿದರು. ನಂತರ ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಹಾಲಾಡಿ ಇವರಿಂದ ಪ್ರೊ.ಪವನ ಕಿರಣಕೆರೆ ವಿರಚಿತ ಪಂಜರ ಪಕ್ಷಿ ಯಕ್ಷಗಾನ ಪ್ರದರ್ಶನಗೊಂಡಿತು.

About the author

Adyot

Leave a Comment