ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಸಿದ್ದಾಪುರದ ಹೋಲಿ ರೋಜರಿ ಚರ್ಚ್ ಆವರಣದಲ್ಲಿ ತಾಲೂಕಿನ ಕ್ರೈಸ್ತ ಸಮುದಾಯದವರಿಗಾಗಿ ೫೦ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಸಭಾಭವನಕ್ಕೆ ಭೂಮಿ ಪೂಜೆ ನಡೆಯಿತು.


ಭೂಮಿಪೂಜೆ ನಡೆಸಿದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,
ನಮ್ಮ ಸರಕಾರ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲಾ ಧರ್ಮದವರನ್ನೂ ಸಮಾನವಾಗಿ ನೋಡಿಕೊಳ್ಳುತ್ತಿದೆ. ಈ ಕ್ಷೇತ್ರದ ಎಲ್ಲ ಜಾತಿಧರ್ಮೀಯರ ಸಹಕಾರದಿಂದ ಆಯ್ಕೆಯಾಗಿ ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ಸಮುದಾಯಗಳಿಗೂ ಸರ್ಕಾರದ ಅನುದಾನವನ್ನು ಸಮಾನವಾಗಿ ಹಂಚಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ.


ಮತದಾರರು ನೀಡಿರುವ ಅವಕಾಶವನ್ನು ಸಮರ್ಪಕವಾಗಿ ನಿಭಾಯಿಸುತ್ತಿದ್ದೇನೆ ಅದರಲ್ಲಿ ತೃಪ್ತಿ ಇದೆ.ಆಯ್ಕೆಯಾದ ನಂತರ ಕ್ಷೇತ್ರದಾದ್ಯಂತ ಸಂಚರಿಸಿ ಜನರ ಸಮಸ್ಯೆಗಳನ್ನು ಅರಿತು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಸರ್ಕಾರದ ಅನುದಾನವನ್ನು ಎಲ್ಲಾ ಸಮುದಾಯಗಳಿಗೂ ಸಮಾನವಾಗಿ ಹಂಚಲಾಗಿದೆ . ಸ್ಥಳ ಲಭ್ಯವಿರುವ ಬಹುತೇಕ ಸಮುದಾಯಗಳಿಗೆ ಸಭಾಭವನಗಳ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ.ಸರ್ಕಾರದ ವಿವಿಧ ಯೋಜನೆಗಳನ್ನು ಸರ್ವಧರ್ಮೀಯರಿಗೂ ತಲುಪಿಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಪ್ರಮುಖವಾಗಿದೆ.ಸಿದ್ದಾಪುರ ಪಟ್ಟಣ ಪಂಚಾಯತಕ್ಕೆ ೧೦ ಕೋಟಿರೂ.ಗೂ ಅಧಿಕ ಅನುದಾನ ನೀಡಲಾಗಿದ್ದು ಮುಂದಿನ ದಿನಗಳಲ್ಲೂ ಎಲ್ಲರ ಸಹಕಾರದಿಂದ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವುದಾಗಿ ಭರವಸೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಚರ್ಚ್ ಫಾದರ್ ಲಾರೆನ್ಸ್ ಡಿಸೋಜಾ ಮಾತನಾಡಿ, ಕ್ರೈಸ್ತ ಸಮುದಾಯದ ಬಹುಕಾಲದ ಬೇಡಿಕೆ ಇಂದು ಈಡೇರಿರುವುದು ಸಂತೋಷದ ಕ್ಷಣವಾಗಿದೆ ಹಿಂದಿನ ಜನಪ್ರತಿನಿಧಿಗಳು ಸ್ಪಂದಿಸದ ಬೇಡಿಕೆಗೆ ಶಾಸಕ ಭೀಮಣ್ಣ ನಾಯ್ಕ ಸ್ಪಂದಿಸಿರುವುದಕ್ಕೆ ಸಮುದಾಯದ ಪರವಾಗಿ ಧನ್ಯವಾದಗಳು ಎಂದು ಹೇಳಿದರು.

ಈ ಸಂದರ್ಭದಲ್ಲಿ ತಾಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಪ್ರಮುಖರಾದ ಸಾವೇರ್ ಡಿಸಿಲ್ವಾ ಹಾಗೂ ವಿಕ್ಟರ್ ಫರ್ನಾಂಡಿಸ್,ವಿ.ಎನ್. ನಾಯ್ಕ, ಆರ್.ಎಂ. ಹೆಗಡೆ ಬಾಳೇಸರ, ಮಾರುತಿ ಕಿಂದ್ರಿ, ಉಪಸ್ಥಿತರಿದ್ದರು.

ನಾನು ಪ್ರಥಮ ಬಾರಿಗೆ ಶಾಸಕನಾಗಿ ಆಯ್ಕೆಯಾಗಿದ್ದೆನೆ.ಸಚೀವ ಸ್ಥಾನ ಬೇಕು ಎಂಬ ಬೇಡಿಕೆಯನ್ನು ಇಟ್ಟಿಲ್ಲ. ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನ ಕೊಡುತ್ತಿದ್ದೆನೆ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯವರಾಗಿದ್ದಾಗ ಸಾಕಷ್ಟು ಅನುದಾನವನ್ನು ತಂದಿದ್ದೆನೆ ಈಗ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಗಳಾಗಿದ್ದಾರೆ ಈಗಲೂ ಸಾಕಷ್ಟು ಅನುದಾನವನ್ನು ನನ್ನ ಕ್ಷೇತ್ರಕ್ಕೆ ನೀಡುತ್ತಾರೆ ಎಂಬ ಭರವಸೆ ಇದೆ ಎಂದು ಆದ್ಯೋತ್ ಪತ್ರಿಕೆಗೆ ಭೀಮಣ್ಣ ನಾಯ್ಕ ಪ್ರತಿಕ್ರಯಿಸಿದ್ದಾರೆ.
——-
