ಸಿದ್ದಾಪುರ ಕಾಂಗ್ರೆಸ್ ಕಚೇರಿಯಲ್ಲಿ ಸಂಘಟನ್ ಸೃಜನ್ ಅಭಿಯಾನ-೨ರ ಪೂರ್ವಭಾವಿ ಸಭೆ

ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಜಿಲ್ಲಾಕಾಂಗ್ರೆಸ್ ಅಧ್ಯಕ್ಷ ಜಿ.ಟಿ.ನಾಯ್ಜಕ ಅಧ್ಯಕ್ಷತೆಯಲ್ಲಿ ಸಂಘಟನ್ ಸೃಜನ್ ಅಭಿಯಾನ-೨’ರ ಪೂರ್ವಭಾವಿ ಸಭೆ ನಡೆಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಜಿ.ಟಿ.ನಾಯ್ಕ,ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರ ಪರಿಕಲ್ಪನೆಯಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ. ಇದೀಗ ಎರಡನೇ ಹಂತದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಐದು ವರ್ಷ ಪೂರೈಸಿದ ಅಧ್ಯಕ್ಷರ ಬದಲಾವಣೆಯಾಗಲಿದ್ದು, ೪೦ ರಿಂದ ೬೦ ವರ್ಷದೊಳಗಿನ ಆಕಾಂಕ್ಷಿಗಳಿಗೆ ಆದ್ಯತೆ ನೀಡಲಾಗುತ್ತದೆ. ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಹಿರಿಯರ ಅನುಭವ ಹಾಗೂ ತ್ಯಾಗವನ್ನೂ ಪಕ್ಷ ಪರಿಗಣಿಸಲಿದೆ.
ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಸಾಲು ಸಾಲು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸಂಘಟಿತ ಹೋರಾಟದ ಮೂಲಕ ಎದುರಿಸಿ ಗೆಲುವು ಸಾಧಿಸಬೇಕಿದೆ ಸದ್ಯದಲ್ಲೆ ಕೆಪಿಸಿಸಿ ವೀಕ್ಷಕರಾದ ಅನಿಲ್ ಕುಮಾರ್ ಪಾಟೀಲ್, ಡಾ. ರಾಘವೇಂದ್ರ ಹಾಗೂ ನವೀನ್ ಡಿಸೋಜ ಜಿಲ್ಲೆಗೆ ಭೇಟಿ ನೀಡಲಿದ್ದು, ಕಾರ್ಯಕರ್ತರು ಅರ್ಜಿ ಸಲ್ಲಿಸಬೇಕು. ಭಿನ್ನಾಭಿಪ್ರಾಯ ಮರೆತು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಶಾಸಕ ಭೀಮಣ್ಣ ನಾಯ್ಕ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಜನರ ಬದುಕಿಗೆ ಆಸರೆಯಾಗಿವೆ ಎಂದರು. ಸಿದ್ದಾಪುರ ಪಟ್ಟಣದ ರಸ್ತೆ ಅಭಿವೃದ್ಧಿಗೆ ೯.೫ ಕೋಟಿ ರೂ. ವೆಚ್ಚ ಮಾಡಲಾಗಿದೆ. ಪಟ್ಟಣದ ಬಹುದಿನಗಳ ಬೇಡಿಕೆಯಾದ ಕುಡಿಯುವ ನೀರಿಗಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಭೈರತಿ ಸುರೇಶ್ ಅವರ ಸಹಕಾರದಿಂದ ಶರಾವತಿ ನದಿಯಿಂದ ೬೯ ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೋಜನೆ ಮಂಜೂರಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮೀಣ ಭಾಗದ ರಸ್ತೆ, ಕಾಲುಸಂಕ ಹಾಗೂ ವಿವಿಧ ಸಮುದಾಯ ಭವನಗಳ ನಿರ್ಮಾಣಕ್ಕೂ ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗಿದೆ. ಗ್ರಾಮೀಣ ಮನೆ ತೆರಿಗೆ ವಿಷಯದಲ್ಲಿ ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ. ಅರಣ್ಯ ಇಲಾಖೆ ಜಾಗದಲ್ಲಿರುವ ಮನೆಗಳಿಗೆ ಹಕ್ಕುಪತ್ರ ಕೊಡಿಸುವ ನೈತಿಕ ಜವಾಬ್ದಾರಿ ಕೇಂದ್ರ ಸರ್ಕಾರ ಮತ್ತು ಸಂಸದರ ಮೇಲಿದೆ,” ಎಂದು ಹೇಳಿದರು.

ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರ ಪರವಾಗಿ ಅವರ ಪುತ್ರ ಆಕಾಶ್ ಲಿಂಬಿಕಾಯಿ ಮಾತನಾಡಿ ಬೆಂಬಲ ಕೋರಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಸ್ವಾಗತಿಸಿದರು.

ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ, ಪ್ರಮುಖರಾದ ವಿ.ಎನ್. ನಾಯ್ಕ, ಬಿ.ಆರ್. ನಾಯ್ಕ, ಬಾಲಕೃಷ್ಣ ನಾಯ್ಕ, ಎನ್.ಟಿ. ನಾಯ್ಕ, ಸಿ.ಆರ್. ನಾಯ್ಕ, ಸೀಮಾ ಹೆಗಡೆ, ಲಲಿತಾ ನಾಯ್ಕ, ಇಂದಿರಾ ನಾಯ್ಕ, ಮಾರುತಿ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment