ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ಪಟ್ಟಣದ ಲಯನ್ಸ್ ಬಾಲಭವನದಲ್ಲಿ ಸ್ಥಳೀಯ ನಿವೃತ್ತ ನೌಕರರ ಸಂಘದವತಿಯಿಂದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಹಿರಿಯ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ಹರೀಶಕುಮಾರ ಎಂ. ಮಾತನಾಡಿ,ಅರವತ್ತು ವರ್ಷ ಮೇಲ್ಪಟ್ಟವರನ್ನು ಸಾಮಾನ್ಯವಾಗಿ ಹಿರಿಯನಾಗರಿಕರೆಂದು ಪರಿಗಣಿಸಲಾಗುತ್ತದೆ. ಸರಕಾರದಲ್ಲಿ ಕೆಲಸ ಮಾಡಿದವರು,ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡುವಂತಹವರು ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ಕೊಟ್ಟಿರುತ್ತಾರೆ ಅವರನ್ನು ಗೌರವಿಸುವುದು ಎಲ್ಲರ ಕರ್ತವ್ಯವಾಗಿದೆ. ಸರಕಾರದಿಂದ ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯಗಳು ಸಿಗುತ್ತದೆ ಹಿರಿಯ ಸುರಕ್ಷತೆಗೆ ಹಲವು ಕಾನೂನುಗಳೂ ಇವೆ ಇದೆಲ್ಲದರ ಮಾಹಿತಿಯನ್ನು ಪಡೆದು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ತಹಸೀಲ್ದಾರ ಮಂಜುಳಾ ನಾಯಕ ಮಾತನಾಡಿ,ಹಿರಿಯರು ತಾವು ಜೀವಮಾನದಲ್ಲಿ ಗಳಿಸಿರುವ ಸ್ವತ್ತನ್ನು ತಮ್ಮ ಬದುಕಿನ ಕೊನೆಯವರೆಗೂ ಕಾಪಾಡಿ ಇಟ್ಟುಕೊಳ್ಳಬೇಕು ಇದರಿಂದ ಇಳಿವಯಸ್ಸಿನಲ್ಲಿ ಆತಂಕಪಡುವುದು ತಪ್ಪುತ್ತದೆ. ಇಂದು ಸೈಬರ್ ಅಪರಾಧ ಹೆಚ್ಚುತ್ತಿದೆ ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿಗಳಲ್ಲಿ ಯಾವುದು ನಿಜ ಯಾವುದು ಸುಳ್ಳು ಎಂದು ತಿಳಿಯದ ಪರಿಸ್ಥಿತಿ ಇದೆ ಇದರ ಬಗ್ಗೆ ಹಿರಿಯರು ಜಾಗರೂಕರಾಗಿರಬೇಕು ಸರಕಾರ ನೀಡುತ್ತಿರುವ ಸೌಲಭ್ಯದ ಬಗ್ಗೆ ಏನಾದರೂ ಸಮಸ್ಯೆಗಳು ಆದಲ್ಲಿ ನಮ್ಮನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಅಧ್ಯಕ್ಷತೆವಹಿಸಿ ಮಾತನಾಡಿ, ತಾಲೂಕಿನ ನಿವೃತ್ತಿನೌಕರರ ಸಂಘವು ಸಕ್ರೀಯವಾಗಿದ್ದು ಹಲವಾರು ಸಮಾಜಮುಖಿ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬರಲಾಗಿದೆ ಹಿರಿಯ ನಾಗರಿಕರು ಕೆಲವು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಪಟ್ಟಣದ ಪ್ರಮುಖ ರಸ್ತೆಯಲ್ಲಿ ವಾಹನದ ಏಕಮುಖ ಸಂಚಾರ ರೂಪಿಸಬೇಕು,ಪುಟ್‌ಪಾತ್‌ನಲ್ಲಿ ಅಂಗಡಿಯವರು ಇಟ್ಟಿರುವ ಸಾಮಾನು ತೆಗೆಯಿಸಿ ಓಡಾಡಲು ಅನುಕೂಲ ಕಲ್ಪಿಸಬೇಕುಈಗಾಗಲೇ ಇಬ್ಬರು ಹಿರಿಯರಿಗೆ ಬೀದಿನಾಯಿಗಳು ಕಚ್ಚಿವೆ ಬೀದಿನಾಯಿಗಳ ನಿಯಂತ್ರಣ ಮಾಡಬೇಕು, ಗ್ರಂಥಾಲಯಕ್ಕೆ ಜಾಗಮಂಜೂರು ಆಗಿದೆ ಕಟ್ಟಡಕಟ್ಟಲು ಅನುದಾನದ ಕೊರತೆ ಇದೆ ಎನ್ನಲಾಗುತ್ತಿದೆ ಶೀಘ್ರದಲ್ಲೆ ಅನುದಾನ ಕೊಟ್ಟು ಗ್ರಂಥಾಲಯ ನಿರ್ಮಾಣವಾಗಬೇಕು ಈ ಸಮಸ್ಯೆಗಳನ್ನು ಶೀಘ್ರದಲ್ಲೆ ಬಗೆಹರಿಸಬೇಕು ಎಂದು ಹೇಳಿದರು.

ಉಪಸ್ಥಿತರಿದ್ದ ತಾಪಂ ಕಾಯನಿರ್ವಹಣಾದಿಕಾರಿ ದೇವರಾಜ ಹಿತ್ತಲಕೊಪ್ಪ,ಸರಕಾರಿ ವಕೀಲ ಧಿರೇಂದ್ರ,ಪಿಎಸ್‌ಐ ಶಾಂತಿನಾಥ ಪಾಸ್ವಾನ ಮಾತನಾಡಿದರು.
ವೇದಿಕೆಯಲ್ಲಿ ಲಯನ್ಸ್ ಅಧ್ಯಕ್ಷ ಎಂ.ಆರ್.ಪಾಟೀಲ, ನಿವೃತ್ತ ನೌಕರರ ಸಂಘದ ಕಾರ್ಯದರ್ಶಿಗಳಾದ ಎನ್.ವಿ.ಹೆಗಡೆ,ವಿ.ಎಸ್.ಶೇಟ್ ಉಪಸ್ಥಿತರಿದ್ದರು
ಅರ್ಚನಾ ಹೆಗಡೆ ಪ್ರಾರ್ಥನೆ ಹಾಡಿದರು ಜಿ.ಜಿ.ಹೆಗಡೆ ಬಾಳಗೋಡ ನಿರೂಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ೮೦ವರ್ಷಕ್ಕೂ ಮೇಲ್ಪಟ್ಟ ಹಿರಿಯ ವೈದ್ಯರಾದ ಅನಂತ ರಾಮಯ್ಯ ಹೆಗಡೆ ಹಾಗೂ ಸಾಮಾಜಿಕ ಕಾರ್ಯಕರ್ತ ಕೇಶವ ಅನಂತ ಡೋಂಗ್ರೆ ಹೊನ್ನೆಗುಂಡಿ ಹಾಗೂ ನಿವೃತ್ತ ನೌಕರರಾದ ಪ್ರಭಾಕರ ಹೆಗಡೆ ಹೊಸೂರು,ವೆಂಕಟರಮಣ ಭಟ್ಟ ವಿದ್ಯಾಗಿರಿ,ವಿಜಯಾನಂದ ಅಚ್ಯುತ್ ಹಬ್ಬು ಇವರನ್ನು ಸನ್ಮಾನಿಸಲಾಯಿತು
