ಆದ್ಯೋತ್ ಸುದ್ದಿನಿಧಿ:-
ವೃತ್ತಿ ಮತ್ತು ಜೀವನ ಎರಡರಲ್ಲೂ ಸಾಹಸ ಮೆರೆದವರು ಬಲು ವಿರಳ.ಅಂತಹ ವಿರಳರಲ್ಲಿ ಎಸ್.ಎಸ್.ನಿಂಗಾಣಿ ಒಬ್ಬರು. 41 ವರ್ಷ 6 ತಿಂಗಳ ಕಾಲ ಸುದೀರ್ಘ ಸೇವಾವಯ ನಂತರ ಜು.31 ರಂದು ನಿವೃತ್ತಿಯಾದ ಈ ವ್ಯಕ್ತಿ ಅರಣ್ಯ ಇಲಾಖೆ ಹಾಗೂ ಸಮಾಜದ ದೊಡ್ಡ ಶಕ್ತಿ.
ಇಲಾಖೆಯಲ್ಲಿ ನೌಕರನಾಗಿ ಉದ್ಯೋಗ ನೇಮಕಾತಿಯ ಆದೇಶ ಪ್ರತಿ ಪಡೆದ ಕಚೇರಿಯಲ್ಲೇ ಅತ್ಯುನ್ನತ ಹುದ್ದೆ ಅಲಂಕರಿಸಿ ನಿವೃತ್ತಿಯಾಗುವ ಸುಯೋಗ ಇವರದು. ಅವರು ಇಲಾಖೆಯ ಸೇವೆಯಿಂದ ನಿವೃತ್ತರಾಗಿದ್ದಾರೆ ಹೊರತು ಜನಸೇವೆಯ ಅವರ ಉತ್ಸಾಹ ಇನ್ನೂ ತಣಿದಿಲ್ಲ. ಕಣಕಣದಲ್ಲೂ ಕೆಲಸ ಮಾಡುವ ತುಡಿತ ಹಾಗೇ ಇದೆ.ಇವರು ಬೆಳಗಾವಿಗೆ ಡಿಎಫ್‌ಒ ಆಗಿ ಬಂದಿದ್ದಾರೆ ಎನ್ನುವ ವಿಷಯ ತಿಳಿಯುವುದೇ ತಡ ದಿನವೂ ಜನ ತಂಡ ತಂಡವಾಗಿ ಬಂದು ನೆಚ್ಚಿನ ನಾಯಕನಿಗೆ, ಮನೆಮಗನಿಗೆ ಅಭಿನಂದನೆ, ಶುಭಾಶಯಗಳ ಮಹಾಪೂರವನ್ನೇ ಹರಿಸಿದರು. ಇದು ಅವರ ಅಭಿಮಾನದ ಪ್ರತೀಕ. ನಿಂಗಾಣಿ ಅವರು ಗಳಿಸಿದ ಜನಮಮನ್ನಣೆಯ ಸಂಕೇತ.ಇದು ವಿಶೇಷ ಹಾಗೂ ಅಪರೂಪವೇ ಸರಿ. ಇಂಥವರ ಸ್ನೇಹ ಹಾಗೂ ಪರಿಚಯ ಎಲ್ಲರಿಗೂ ಹೆಮ್ಮೆಯ ಸಂಗತಿ.

ಯಾವುದೇ ಒಬ್ಬ ವ್ಯಕ್ತಿಗೆ ವೃತ್ತಿ ಜೀವನ ಎನ್ನುವುದು ಒಂದು ಇರುತ್ತದೆ. ಅದು ಖಾಸಗಿಯಾಗಿರಬಹುದು ಇಲ್ಲವೇ ಸರಕಾರಿಯಾಗಿರಬಹುದು. ಅದು ಆ ವ್ಯಕ್ತಿಯ ಜೀವನದ ಮಹತ್ತರ ಘಟ್ಟ. ಬದುಕಿನ ನಿರ್ವಹಣೆಯ ದಾರಿ. ಇದನ್ನು ದೇವರ ಪೂಜೆಯಂತೆ ಶ್ರದ್ಧೆಯಿಂದ ಆಚರಿಸಿದರೆ ಅದು ಒಲಿಯುತ್ತದೆ ಮತ್ತು ಶ್ರೇಯಸ್ಸನ್ನು ಕೊಡುತ್ತದೆ. ಹೀಗೆ ದೇವರ ಅನುಗ್ರಹ ಮತ್ತು ಸ್ವಂತ ಪರಿಶ್ರಮ, ನಿಸ್ವಾರ್ಥ ಶ್ರದ್ಧೆಯಿಂದ ಕಳೆದ ನಾಲ್ಕು ದಶಕ(40 ವರ್ಷ) ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಎಸ್.ಎಸ್. ನಿಂಗಾಣಿ ಅವರು. 41 ವರ್ಷಗಳ ಸೇವೆ ಎಂದರೆ ಹುಡುಗಾಟದ ಮಾತಲ್ಲ. ಹಲವು ಏಳುಬೀಳುಗಳು, ನೋವು ನಲಿವುಗಳ ಮಧ್ಯೆ ಇಡೀ ಇಲಾಖೆಯೇ ಹೆಮ್ಮೆ ಪಡುವಂತೆ ಜನಸಾಮಾನ್ಯರೊಂದಿಗೆ ಬೆರೆತು ಅವರ ಮನದಾಳದಲ್ಲಿ ಭದ್ರ ಸ್ಥಾನ ಪಡೆದವರು ಎಸ್.ಎಸ್. ನಿಂಗಾಣಿ ಅವರು. ಫೆ.1 1985 ರಂದು ಸೇವೆ ಆರಂಭಿಸಿದ ಇವರಿಗೆ ಇಂದು 4 ದಶಕಗಳ ಪೂರೈಸಿದ ಸಂತಸ ಹಾಗೂ ಹೆಮ್ಮೆಯ ಕ್ಷಣ.

ಇವರು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರಲ್ಲ. ಬಡತನದಲ್ಲಿ ಅರಳಿದ ಹೂವಿದು. ತಂದೆಯವರ ಮೈಯಲ್ಲಿ ಹರಿಯುತ್ತಿದ್ದ ಪ್ರಾಮಾಣಿಕತೆ ಮತ್ತು ಕಾಡಿನ ಸೇವೆಯ ರಕ್ತ ಇವರಿಗೂ ಬಂದಿದೆ. ಪರಿಣಾಮ ಇವರು ಹೋದಲ್ಲೆಲ್ಲಾ ಅರಣ್ಯ ನಳನಳಿಸಿದೆ. ಜನ ಇವರನ್ನು ನೋಡಿದಾಕ್ಷಣ ಆಪದ್ಬಾಂಧವನಂತೆ ಅಪ್ಪಿಕೊಳ್ಳುತ್ತಾರೆ. ಇವರಿಗೆ ಜನಸಾಮಾನ್ಯರ ಕಷ್ಟದ ಅರಿವಿದೆ. ಇಲಾಖೆಯ ನಿಯಮಗಳ ಬಗ್ಗೆಯೂ ಗೌರವವಿದೆ. ಇವೆರಡನ್ನು ಸಮತೋಲನವಾಗಿ ಈವರೆಗೂ ಕಾಪಾಡಿಕೊಂಡು ಬಂದಿರುವುದು ಇವರ ಹೆಗ್ಗಳಿಕೆ.

ಮಾನವೀಯ ಸಂವೇದನೆ, ಇಚ್ಛಾಶಕ್ತಿ ಮತ್ತು ಕರ್ತವ್ಯ ಪ್ರಜ್ಞೆ ಈ ಮೂರು ಅಂಶಗಳು ಒಬ್ಬ ಅರಣ್ಯ ಇಲಾಖೆ ಅಧಿ ಕಾರಿಯಲ್ಲಿ ಮೇಳೈಸಿದಾಗ ಹೊರಹೊಮ್ಮುವ ಫಲಿತಾಂಶ ಇಡೀ ಸಮಾಜವೇ ಮೆಚ್ಚುವಂತಾಗಿರುತ್ತದೆ. ಇಲಾಖೆಯ ಘನತೆ ಹೆಚ್ಚುವುದರ ಜತೆಗೆ ವನ್ಯಜೀವಿಗಳ ರಕ್ಷಣೆ, ಪೋಷಣೆಯೂ ಅಗುತ್ತದೆ. ಇದಕ್ಕೊಂದು ಉತ್ತಮ ಉದಾಃರಣೆ ಎಂದರೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಳವ ಗ್ರಾಮದಿಂದ 1 ಕಿಮೀ ದೂರದಲ್ಲಿ ಹಳ್ಳಕ್ಕೆ ತಡೆಗೋಡೆ ಕಟ್ಟಿ ನಿರ್ಮಿಸಿದ ಕೆರೆ ಇಂದಿಗೂ ವನ್ಯಜೀವಿಗಳ ಜಲದಾಹ ತೀರಿಸುತ್ತಿದೆ. ಇದು ನಿಂಗಾಣಿಯವರ ದೂರದೃಷ್ಟಿಯ ಫಲ. ಬರ ಹಾಗೂ ಬಿರು ಬಿಸಿಲಲ್ಲೂ ಈ ಕೆರೆ ಜಲಸಮೃದ್ಧಿಯಿಂದ ನಳನಳಿಸುತ್ತಿದೆ. ಇದು ಒಂದು ಸಣ್ಣ ಉದಾಹರಣೆಯಷ್ಟೇ. ಇಂತಹ ನೂರಾರು ಕೆಲಸಗಳು ಇವರಿಂದ ಆಗಿವೆ. ಇಂತಹ ಅಧಿ ಕಾರಿಗಳು ಇಲಾಖೆಯ ಹಾಗೂ ನಾಡಿನ ಹೆಮ್ಮೆ ಇವರ ಕೆಲಸ ಅನುಕರಣೀಯ. ನಿಂಗಾಣಿ ಅವರು ಹಂತಹಂತವಾಗಿ ಪದೋನ್ನತಿ ಹೊಂದಿ ಹೊನ್ನಾವರದ ,ಶಿರಸಿಯಲ್ಲಿ ಎಸಿಎಫ್ ಆಗಿ ಕೊನೆಗೆ ಡಿಎಫ್‌ಒ ಆಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸಿದರು.

ಅವರು ಎಲ್ಲೆಲ್ಲಿ ಕೆಲಸ ಮಾಡಿದ್ದಾರೋ ಅವರ ಅನುಪಮ ಕೆಲಸವನ್ನು ಇಲ್ಲಿನ ಜನ ಇಂದಿಗೂ ನೆನೆಸುತ್ತಾರೆ. ಇದಕ್ಕಿಂತ ಬೇರೆ ಧನ್ಯತೆ ಬೇಕೇ? ಎಲ್ಲದಕ್ಕೂ ಮಿಗಿಲಾಗಿ ಇವರು ಒಬ್ಬ ಸಹೃದಯಿ ಮತ್ತು ಎಲ್ಲರಿಗೂ ಸಹಾಯ ಮಾಡುವ ಮನೋಭಾವದ ಅಪರೂಪದ ವ್ಯಕ್ತಿ . ಅವರ ಗುಣವೇ ಅವರ ಶಕ್ತಿ. ಇವರು ಸರಕಾರಿ ದಾಖಲೆಗಳ ಪ್ರಕಾರ ಸೇವೆಯಿಂದ ನಿವೃತ್ತಿಯಾಗಿರಬಹುದು ಆದರೆ ಜನರ ಮನದಾಳದಲ್ಲಿ ಇವರ ಸೇವಾ ದಾಖಲೆ ಶಾಶ್ವತ. ಇವರು ಸಾಗಿ ಬಂದ ದಾರಿ ಏರಿದ ಎತ್ತರ ಇಡೀ ಸಮಾಜಕ್ಕೆ ಮಾದರಿ. ಜನಸೇವಕರಾಗಿ, ಜನಪ್ರತಿನಿಧಿ ಗಳಾಗಿ ಇಂಥವರು ಸಮಾಜಕ್ಕೆ ಅತ್ಯಗತ್ಯ.
