ಸಿದ್ದಾಪುರ ತಾಲೂಕಿನ ಕರಡು ಮತದಾರರ ಪಟ್ಟಿ ಪ್ರಕಟ

ಆದ್ಯೊತ್ ಸುದ್ದಿನಿಧಿ:
ಕರ್ನಾಟಕದಲ್ಲಿ ಜೂನ್ ೩೦ರಿಂದ ಆರಂಭಗೊಂಡಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ ಐ ಆರ್) ಪ್ರಕ್ರಿಯೆಯ ಅಂಗವಾಗಿ ಸಿದ್ದಾಪುರ ತಾಲೂಕಿನ ಕರಡು ಮತದಾರರ ಪಟ್ಟಿಯನ್ನು ಸೋಮವಾರ ಪ್ರಕಟಿಸಲಾಗಿದೆ ಎಂದು ಶಿರಸಿ ಉಪವಿಭಾಗಾಧಿಕಾರಿ ಚಂದ್ರಶೇಖರ್ ಆರ್. ಜೆ ಹೇಳಿದ್ದಾರೆ.

ಈ ಹಿಂದೆ ತಾಲ್ಲೂಕಿನಲ್ಲಿ ಒಟ್ಟು ೮೬,೨೩೬ ಮತದಾರರಿದ್ದು ಪರಿಷ್ಕರಣೆಯ ಬಳಿಕ ಪ್ರಕಟಗೊಂಡ ಕರಡು ಪಟ್ಟಿಯಲ್ಲಿ ೮೨,೧೪೨ ಮತದಾರರು ಸ್ಥಾನ ಪಡೆದಿದ್ದಾರೆ. ಇವರಲ್ಲಿ ೪೧,೪೨೧ ಪುರುಷರು, ೪೦,೭೨೦ ಮಹಿಳೆಯರು ಹಾಗೂ ಒಬ್ಬರು ಇತರ ಮತದಾರರಿದ್ದಾರೆ. ಹಿಂದಿನ ಪಟ್ಟಿಯ ಶೇ.೯೫.೨೫ರಷ್ಟು ಮತದಾರರು ಕರಡು ಪಟ್ಟಿಯಲ್ಲಿ ಮುಂದುವರಿದಿದ್ದಾರೆ.ಕರಡು ಪಟ್ಟಿಯಿಂದ ಒಟ್ಟು ೪,೦೯೪ ಮತದಾರರು ಹೊರಗುಳಿದಿದ್ದಾರೆ. ಇವರಲ್ಲಿ ೯೭ ಜನ ಗೈರಾಗಿರುವುದಾಗಿ, ೧,೫೬೨ ಜನ ಸ್ಥಳಾಂತರಗೊಂಡಿರುವುದಾಗಿ, ೨,೦೬೩ ಜನ ಮರಣ ಹೊಂದಿರುವುದಾಗಿ ಹಾಗೂ ೩೭೨ ಜನ ಎರಡು ಕಡೆ ನೋಂದಣಿಯಾಗಿರುವ (ಡೂಪ್ಲಿಕೇಟ್) ಮತದಾರರೆಂದು ಗುರುತಿಸಲಾಗಿದೆ.ಕರಡು ಪಟ್ಟಿಯಲ್ಲಿರುವ ಮತದಾರರ ಪೈಕಿ ಸಿಸ್ಟಮ್ ಮೂಲಕ ಗುರುತಿಸಲಾದ ೧,೫೪೭ ದಾಖಲೆರಹಿತ ಹಾಗೂ ಮತದಾರರ ಮಾಹಿತಿಯನ್ನು ಮ್ಯಾಪ್ ಮಾಡಲು ಸಾಧ್ಯವಾಗದ ೫೯೩ ಪ್ರಕರಣಗಳು ಸೇರಿದಂತೆ ಒಟ್ಟು ೨,೧೪೦ ಮತದಾರರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಈ ವಿಚಾರಣೆಗಾಗಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಕಚೇರಿಗಳನ್ನು ಕೇಂದ್ರಗಳಾಗಿ ಗುರುತಿಸಲಾಗಿದ್ದು, ಏಳು ವಿಶೇಷ ಸಹಾಯಕ ಮತದಾರ ನೋಂದಣಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.ಅಧಿಕಾರಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಂಬಂಧಿಸಿದ ಮತದಾರರಿಗೆ ನೋಟಿಸ್ ಜಾರಿಗೊಳಿಸಿ, ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ವಿಚಾರಣೆ ನಡೆಸಲಿದ್ದಾರೆ.ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಆಗಸ್ಟ್ ೨೪ರಿಂದ ಸೆಪ್ಟೆಂಬರ್ ೨೩ರವರೆಗೆ ಸಾರ್ವಜನಿಕರು ತಮ್ಮ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹೊಸದಾಗಿ ಮತದಾರರಾಗಿ ನೋಂದಾಯಿಸಿಕೊಳ್ಳಲು ನಮೂನೆ-೬ ಹೆಸರು ತೆಗೆದುಹಾಕಲು ನಮೂನೆ-೭ ಹಾಗೂ ಹೆಸರು, ವಿಳಾಸ ಸೇರಿದಂತೆ ಅಗತ್ಯ ತಿದ್ದುಪಡಿಗಳಿಗೆ ನಮೂನೆ-೮ ರಲ್ಲಿ ಸಲ್ಲಿಸಲು ಅವಕಾಶವಿದೆ ಅಕ್ಟೋಬರ್ ೧, ೨೦೨೬ರಂದು ೧೮ ವರ್ಷ ಪೂರ್ಣಗೊಳಿಸುವ ಯುವಕರೂ ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳಬಹುದು.
ಮುಂದಿನ ಅರ್ಹತಾ ದಿನಾಂಕಗಳಾದ ಜನವರಿ ೧, ಏಪ್ರಿಲ್ ೧, ಜುಲೈ ೧ ಮತ್ತು ಅಕ್ಟೋಬರ್ ೧ಕ್ಕೆ ೧೮ ವರ್ಷ ಪೂರ್ಣಗೊಳಿಸುವವರಿಂದಲೂ ಮುಂಗಡ ಅರ್ಜಿಗಳನ್ನು ಸ್ವೀಕರಿಸಿ, ಸಂಬAಧಿಸಿದ ಅವಧಿಯಲ್ಲಿ ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗುವುದು.ಸ್ವೀಕರಿಸಲಾದ ಎಲ್ಲಾ ಹಕ್ಕು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿ, ವಿಚಾರಣೆ ನಡೆಸಿದ ಬಳಿಕ ಅಕ್ಟೋಬರ್ ೨೭, ೨೦೨೬ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ತಿಳಿಸಿದರು.

ಸಿದ್ದಾಪುರದಲ್ಲಿ ನೆಲೆಮಾವು,ಪಟ್ಟಣದ ಸಿದ್ದಿವಿನಾಯಕ,ಹಾಳದಕಟ್ಟ,ಹಾರೆಕೊಪ್ಪ ನಾಲ್ಕು ಹೊಸ ಮತಗಟ್ಟೆಯನ್ನು ಮಾಡಲಾಗಿದೆ.

About the author

Adyot

Leave a Comment