ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ಹಲಗೇರಿ ಅಂಬೇಡ್ಕರ ಸಮುದಾಯಭವನದಲ್ಲಿ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದಪ್ರಜಾಸೇವಾ ಆಂದೋಲನಾ ಸಭೆ ನಡೆಯಿತು.

ಸಭೆಯ ಅಧ್ಯಕ್ಷತೆವಹಿಸಿದ್ದ ಶಾಸಕ ಭೀಮಣ್ಣ ನಾಯ್ಕ ಮಾತನಾಡಿ,
ಸರಕಾರದ ಯೋಜನೆಗಳು ಜನರ ಬದುಕನ್ನು ಬೆಳಕಾಗಿಸಬೇಕು.ಜನಪರ ಯೋಜನೆಗಳು ಕೇವಲ ಪಟ್ಟಿಯಲ್ಲಿ ಉಳಿಯದೆ ಬಡವರು ಹಾಗೂ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವುದರ ಜೊತೆಗೆ ಅವರ ಜೀವನಕ್ಕೆ ಬೆಳಕು ನೀಡುವಂತಾಗಬೇಕು ಈ ಉದ್ದೇಶದಿಂದಲೇ ಪ್ರಜಾಸೇವಾ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಭೆಯಲ್ಲಿ ಕೇವಲ ವ್ಯಯಕ್ತಿಕ ಸಮಸ್ಯೆಗಳನಷ್ಟೆ ಹೇಳಬೇಕಾಗಿಲ್ಲ ಸಮುದಾಯಕ್ಕೆ ಸಂಬಂಧಿಸಿದ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ರಸ್ತೆ, ಚರಂಡಿ, ಕುಡಿಯುವ ನೀರು, ಶಾಲಾ-ಕಾಲೇಜು ಹಾಗೂ ಶಿಕ್ಷಣ ಸೇರಿದಂತೆ ವಿವಿಧ ಮೂಲಸೌಕರ್ಯ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಬಹುದು. ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.


ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ೧.೨೦ ಕೋಟಿಗೂ ಹೆಚ್ಚು ಕುಟುಂಬಗಳು ಪ್ರಯೋಜನ ಪಡೆಯುತ್ತಿದ್ದು, ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿವೆ. ಶಿಕ್ಷಣಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳಿಗೂ ಸರ್ಕಾರಿ ಬಸ್ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸುವ ಮೂಲಕ ಶಿಕ್ಷಣದಲ್ಲಿ ಸಮಾನ ಅವಕಾಶಕ್ಕೆ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಯುವಕರನ್ನು ಸಂಘಟಿಸಿ ಅಭಿವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ‘ಭಾರತ್ ಜೋಡೋ’ ಯುವ ಸಂಘಟನೆ ಮೂಲಕ ಯುವಶಕ್ತಿಯನ್ನು ಸಬಲೀಕರಣಗೊಳಿಸ ಲಾಗುತ್ತಿದ್ದು, ಈ ಸಂಘ ಗಳಿಗೆ ವಾರ್ಷಿಕ ರೂ.೧೦ ಲಕ್ಷ ಅನುದಾನ ನೀಡಲಾಗುತ್ತಿದೆ ಇದೆಲ್ಲದರ ಜೊತೆಗೆ ಜನರ ಸಮಸ್ಯೆಯೂ ಬಗೆಹರಿಯಬೇಕು ಅಭಿವೃದ್ಧಿಯೂ ಆಗಬೇಕು ಈ ನಿಟ್ಟಿನಲ್ಲಿ ಈ ಆಂದೋಲನವು ಸಹಕಾರಿಯಾಗಲಿದೆ ಎಂದು ಭೀಮಣ್ಣ ನಾಯ್ಕ ಹೇಳಿದರು.


ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯ ಮಾತನಾಡಿ,ಪ್ರಜಾ ಸೇವೆ ಎಂಬುದು ಕರ್ನಾಟಕ ಸರ್ಕಾರವು ಸಾರ್ವಜನಿಕರ ಅಹವಾಲುಗಳನ್ನು ತ್ವರಿತವಾಗಿ ಆಲಿಸಲು ಮತ್ತು ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯಲು ಆರಂಭಿಸಿರುವ ಒಂದು ವಿನೂತನ ಅಭಿಯಾನ ಹಾಗೂ ಹೊಸ ಇಲಾಖೆಯಾಗಿದೆ.ಸಾರ್ವಜನಿಕರು ಸಣ್ಣಪುಟ್ಟ ಕೆಲಸಗಳಿಗೂ ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಿ, ಅಧಿಕಾರಿಗಳೇ ಜನರ ಬಳಿ ಹೋಗಿ ಸಮಸ್ಯೆ ಬಗೆಹರಿಸುವುದು ಇದರ ಪ್ರಮುಖ ಉದ್ದೇಶ ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ತಾಲೂಕು/ಹೋಬಳಿ ಮಟ್ಟದಲ್ಲಿ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸುತ್ತಾರೆ.ಜನ ಸಾಮಾನ್ಯರು ನೀಡುವ ಎಲ್ಲಾ ಅರ್ಜಿಗಳೂ ಕೂಡ ಆನ್ ಲೈನ್ ನಲ್ಲಿ ನಮೂದಿಸಲಾಗುವುದು. ಸ್ವೀಕರಿದ ಎಲ್ಲಾ ಅರ್ಜಿಗಳಿಗೂ ೨೦ ದಿನಗಳ ಒಳಗೆ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದರು.


ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿ,ಇದು ಕೇವಲ ನಿಮ್ಮ ಸಮಸ್ಯೆಗಳನ್ನು ಹೇಳುವ ಸಭೆ ಮಾತ್ರ ಅಲ್ಲ. ನಿಮ್ಮ ಪಂಚಾಯತಿ ಮತ್ತು ಹೋಬಳಿ ಮಟ್ಟದಲ್ಲಿ ಆಗಬೇಕಾದ ಅಭಿವೃದ್ಧಿ ಕೆಲಸಗಳು ಮತ್ತು ಸಲಹೆಗಳನ್ನೂ ನೀಡಬಹುದು. ಇದರಿಂದ ನಮಗೆ ಮುಂದಿನ ಯೋಜನೆಗಳನ್ನು ರೂಪಿಸಲು ಅನುಕೂಲವಾಗುತ್ತದೆ ಎಂದರು.

ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್,ಇಲಾಖೆಯು ಜನಸ್ನೇಹಿಯಾಗಿಸುವ ಉದ್ದೇಶದಿಂದ ಮನೆ ಮನೆಗೆ ಪೊಲೀಸ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಹಿರಿಯ ನಾಗರಿಕರ ಅನುಕೂಲಕ್ಕಾಗಿ ಆಸರೆ ಎಂಬ ವಿಶಿಷ್ಟ ಕಾರ್ಯಕ್ರಮ ರೂಪಿಸಿದ್ದೇವೆ ಎಂದರು ವೇದಿಕೆಯಲ್ಲಿ ಶಿರಸಿ ಉಪವಿಭಾಗಾಧಿಕಾರಿ ಚಂದ್ರಶೇಖರ ಆರ್.ಜಿ.,ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ,ಉಪಅರಣ್ಯ ಸಂರಕ್ಷಣಾಧಿಕಾರಿ ಸಂದೀಪ ಸೂರ್ಯವಂಶಿ,ತಾಪA ಮುಖ್ಯಕಾರ್ಯನಿರ್ವಹಣಾಧಿಕಾರಿ ದೇವರಾಜ ಹಿತ್ತಲಕೊಪ್ಪ,ಜಿಲ್ಲಾ ಆರೋಗ್ಯಾಧಿಕಾರಿ ಸಂಜಯ ದೊಡ್ಮನಿ ಸೇರಿದಂತೆ ಹಲವು ಇಲಾಖೆಯ ಜಿಲ್ಲಾಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು

ತಹಸೀಲ್ದಾರ ಮಂಜುಳಾ ನಾಯಕ ಸ್ವಾಗತಿಸಿದರು. ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೆಗಡೆ ನಿರೂಪಣೆ ಮಾಡಿದರು.
ಇದೇ ಸಂದರ್ಭದಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.ಅನೇಕ ಯೋಜನೆಗಳಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
