ಆದ್ಯೊತ್ ಸುದ್ದಿನಿಧಿ
ಕೇಂದ್ರಸರಕಾರವು ಕಸ್ತೂರಿರಂಗನ್ ವರಿದಿಯ ಅನುಷ್ಠಾನಕ್ಕಾಗಿ ಎಳನೇ ಬಾರಿ ಅಧಿಸೂಚನೆಯನ್ನು ಹೊರಡಿಸಿದ್ದು ಈ ವರದಿಯನ್ನು ವಿರೋಧಿಸಿ ಶುಕ್ರವಾರ ಜನಧ್ವನಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಯ ಸದಸ್ಯರು ಸಾಮಾಜಿಕ ಕಾರ್ಯಕರ್ತ ವಸಂತ ನಾಯ್ಕ ಮನಮನೆ ನೇತೃತ್ವದಲ್ಲಿ ಸಿದ್ದಾಪುರ ತಾಲೂಕಿನ ಐತಿಹಾಸಿಕ ಬೇಡ್ಕಣಿ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಸುಮಾರು ಏಳು ಕಿ.ಮಿ.ಪಾದಯಾತ್ರೆ ಮಾಡಿ ಪಟ್ಟಣದ ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಮಂಜುಳಾ ನಾಯಕ ಮೂಲಕ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಿದರು.


ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ,ಜನಸಾಮಾನ್ಯರ ಜೊತೆಗೆ ಚರ್ಚಿಸದೆ ಯಾವುದೇ ನಿಯಮಾವಳಿಯನ್ನು ಮಾಡದೆ ಕೇವಲ ಅಂತರಿಕ್ಷದಲ್ಲಿ ಸಂಚರಿಸಿ ವರದಿಯನ್ನು ತಯಾರಿಸಲಾಗಿದ್ದು ಈ ಕಸ್ತೂರಿರಂಗನ್ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಬೇಕು. ಈ ವರದಿಯ ಅನುಷ್ಠಾನದ ಬಗ್ಗೆ ಸಾಕಷ್ಟು ಬಾರಿ ಸಭೆಯನ್ನು ನಡೆಸಲಾಗಿದೆ ಆದರೆ ಈ ವರದಿ ಅನುಷ್ಠಾನದಿಂದ ತೊಂದರೆಗೊಳಗಾಗುವ ಪ್ರದೇಶದ ಯಾವುದೇ ಸಂಸದರು ಈ ವರದಿಯ ಬಗ್ಗೆ ಅಪಸ್ವರ ಎತ್ತಿಲ್ಲ ಸುಪ್ರಿಂಕೋರ್ಟಗೆ ಹೋಗುವ ಮೊದಲೇ ಸಭೆಯಲ್ಲೆ ಈ ಬಗ್ಗೆ ತಕರಾರು ಸಲ್ಲಿಸಿದ್ದರೆ ಇಂದು ನಾವೆಲ್ಲ ಹೋರಾಟ ಮಾಡಬೇಕಾದ ಅವಶ್ಯಕತೆ ಇರಲಿಲ್ಲ ಈಗಲಾದರೂ ಸಂಸದರು ಇದನ್ನು ವಿರೋಧಿಸಿ ಧ್ವನಿ ಎತ್ತಬೇಕಾಗಿದೆ ನಮ್ಮ ರಾಜ್ಯ ಸರಕಾರವು ಈ ವರದಿಯನ್ನು ಪ್ರಬಲವಾಗಿ ವಿರೋಧಿಸುತ್ತಿದ್ದು ಜನರ ಪರವಾಗಿ ನಿಂತಿದೆ ವರದಿಯನ್ನು ತಿರಸ್ಕರಿಸುವ ತೀರ್ಮಾನವನ್ನು ಮಾಡಲಾಗಿದ್ದು ಮೂರು ದಿನಗಳ ವಿಶೇಷ ಅಧಿವೇಶನವನ್ನು ಇದೇ ತಿಂಗಳಲ್ಲಿ ಕರೆಯಲಾಗಿದೆ ಎಂದು ಹೇಳಿದರು.


ಅರಣ್ಯ ಅತಿಕ್ರಮಣ ಹೋರಾಟ ಸಮಿತಿಯ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ,ಜನರ ಬದುಕಿನ ಜೊತೆಗೆ ಸರಕಾರ ಚೆಲ್ಲಾಟವಾಡುತ್ತಿದೆ ಹಲವಾರು ಯೋಜನೆಗಳಿಗೆ ತಮ್ಮ ಭೂಮಿಯನ್ನು ಕಳೆದು ಕೊಂಡಿರುವ ಜಿಲ್ಲೆಯ ಜನರು ಈಗ ಕಸ್ತೂರಿ ರಂಗನ್ ವರದಿಯಿಂದ ಇನ್ನಷ್ಟು ತೊಂದರೆಗೆ ಒಳಗಾಗಲಿದ್ದಾರೆ ಇಂತಹ ಮಾರಕ ಯೋಜನೆಗಳು ಜಿಲ್ಲೆಗೆ ಕಾಲಿಡದಂತೆ ಪ್ರತಿಭಟನೆಯನ್ನು ಆಕ್ಷೇಪಗಳನ್ನು ತೀವ್ರಗೊಳಿಸಬೇಕಾಗಿದೆ ಎಂದು ಹೇಳಿದರು.


ಸಾಮಾಜಿಕ ಕಾರ್ಯಕರ್ತ ವಸಂತ ನಾಯ್ಕಮನಮನೆ ಮಾತನಾಡಿ,ಕಸ್ತೂರಿರಂಗನ್ ವರದಿ ಜಾರಿಯಾಗುವುದರಿಂದ ಪ್ರತಿಭಟನೆ ಸಂಘಟಿಸಿರುವ ನಮಗೆಲ್ಲ ತೊಂದರೆ ಇಲ್ಲ ಆದರೆ ನಮ್ಮ ತಾಲೂಕಿನ ನೂರಕ್ಕೂ ಹೆಚ್ಚಿನ ಗ್ರಾಮಗಳ ಸಾವಿರಾರು ಜನರಿಗೆ ತೊಂದರೆಯಾಗಲಿದೆ. ಇಲ್ಲಿಯ ಜನರ ಆರ್ಥಿಕ,ಸಾಮಾಜಿಕ,ಸಾಂಸ್ಕೃತಿಕ ಬದುಕು ಅಸ್ತವ್ಯಸ್ತವಾಗಲಿದೆ. ಪ್ರತಿಯೊಂದಕ್ಕೂ ಇಲಾಖೆಯವರ ಮರ್ಜಿಯನ್ನು ಕಾಯಬೇಕಾದ ಪರಿಸ್ಥಿತಿ ಬರುತ್ತದೆ ಇದನ್ನೆಲ್ಲ ಮನಗಂಡು ನಾವು ಈ ವರದಿಯ ವಿರುದ್ಧ ಹೋರಾಟ ನಡೆಸುತ್ತಿದ್ದೆವೆ ನಮ್ಮ ಜಿಲ್ಲೆಯಲ್ಲಿ ಅರಣ್ಯಅತಿಕ್ರಮಣದಾರರು ಹೆಚ್ಚಿದ್ದಾರೆ ಇಲ್ಲಿಯವರೆಗು ಅರಣ್ಯ ಅತಿಕ್ರ ಣದಾರರ ಹಿತ ಕಾಪಾಡುತ್ತಿರುವುದು ರವೀಂದ್ರ ನಾಯ್ಕರು. ಅವರ ಜನಪರ ಹೋರಾಟವನ್ನು ಹೀಗಳೆಯುವ ಅನೇಕ ನಾಯಕರಿದ್ದಾರೆ ಆದರೆ ಅವರಿಗೆ ಇರುವ ಅಧಿಕಾರದ ಆಸೆ ಇವರಿಗಿಲ್ಲ ಹೀಗಾಗಿ ನಿಜವಾದ ಜನನಾಯಕ ರವೀಂದ್ರ ನಾಯ್ಕ ಅವರೂ ಸಹ ಈ ಕಸ್ತೂರಿರಂಗನ್ ವರದಿ ವಿರುದ್ಧದ ಹೋರಾಟವನ್ನು ನಡೆಸುತ್ತಿದ್ದಾರೆ ನಾವೆಲ್ಲ ಅವರ ಜೊತೆ ಕೈಜೋಡಿಸಿ ಈ ವರದಿ ಅನುಷ್ಠಾನವಾಗದ ಹಾಗೇ ನೋಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಕನ್ನೇಶ ನಾಯ್ಕ ಕೋಲಸಿರ್ಸಿ ಪ್ರಾಸ್ತಾವಿಕ ಮಾತನಾಡಿ ಕಸ್ತೂರಿ ರಂಗನ್ ವರದಿಯಿಂದಾಗುವ ಪರಿಣಾಮವನ್ನು ವಿವರಿಸಿದರು.
ಪ್ರತಿಭಟನೆಯಲ್ಲಿ ಸಂಕಲ್ಪ ಸೇವಾ ಟ್ರಸ್ಟ್ಅಧ್ಯಕ್ಷ ಪಿ.ಬಿ.ಹೊಸೂರು,ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪಿ.ವಿ.ನಾಯ್ಕ,ಐಕೆ.ಪಾಟೀಲ, ಕುಮಾರ ಗೌಡರ್,ವಿವೇಕ ಭಟ್,ಸುಮಂಗಲಾ ನಾಯ್ಕ,ಲೀಲಾವತಿ ನಾಯ್ಕ, ಗಾಂಧೀಜಿ ನಾಯ್ಕ,ಪ್ರಶಾಂತ ನಾಯ್ಕ ಮುಂತಾದವರು ಉಪಸ್ಥಿತರಿದ್ದರು
