ಅಲುಗಾಡುತ್ತಿದೆ ಯಡಿಯೂರಪ್ಪನವರ ಖುರ್ಚಿ

ಆದ್ಯೋತ್ ಸುದ್ದಿನಿಧಿ: ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರವನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲೇ ಅಂಕೆ-ಸಂಖ್ಯೆಗಳ ಮ್ಯಾಜಿಕ್ ಮೂಲಕ ಪತನಗೊಳಿಸಿ ಅಧಿಕಾರ ಹಿಡಿದಯಡಿಯೂರಪ್ಪನವರಿಗೆ ಅದೇ ಅಂಕೆ-ಸಂಖ್ಯೆಗಳ ಮೂಲಕ ತಿರುಗೇಟು ನೀಡಲು ಅವರ ಪಕ್ಷದ ಶಾಸಕರೇ ಮುಂದಾಗಿದ್ದಾರೆ. ತನ್ನ ಸಿದ್ದಾಂತ, ತತ್ವ ಇವುಗಳನ್ನೆಲ್ಲ ಬದಿಗಿಟ್ಟು ಅಧಿಕಾರದ ಬೆನ್ನುಹತ್ತಿರುವ ಬಿಜೆಪಿ ಬಂದವರಿಗೆಲ್ಲ ಹಸಿರು ಹಾಸಿ ಸ್ವಾಗತಿಸಿದ ಪರಿಣಾಮ ಕಾಂಗ್ರೇಸ್ ನ ಮತ್ತೊಂದು ಮುಖದಂತಾಗಿದೆ.


ಸಮ್ಮಿಶ್ರ ಸರಕಾರದ ಪತನದ ನಂತರ ಯಡಿಯೂರಪ್ಪನವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಲು ಬಿಜೆಪಿ ಹೈಕಮಾಂಡ್ ಗೆ ಇಷ್ಷವಿರಲಿಲ್ಲ. ಆದರೆ ಪಕ್ಷದ ಬೆನ್ನೆಲುಬಾಗಿರುವ ಬಹುಸಂಖ್ಯಾತ ಲಿಂಗಾಯತ ವರ್ಗದವರನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ ಎಂಬ ಒಂದೇ ಕಾರಣದಿಂದ ಒಲ್ಲದ ಮನಸ್ಸಿನಿಂದ ಅವರಿಗೆ ಪಟ್ಟಕಟ್ಟಿದರು ಆದರೆ ಅವರ ಕೈಯನ್ನು ಕಟ್ಟಿಹಾಕಲು ಚುನಾವಣೆಯಲ್ಲಿ ಸೋತ ಲಕ್ಷ್ಮಣ ಸವದಿ ಸೇರಿದಂತೆ ಮೂವರನ್ನು ಉಪಮುಖ್ಯಮಂತ್ರಿಯನ್ನಾಗಿಸಲಾಯಿತು.
ಮಂತ್ರಿಮಂಡಲ ರಚನೆಯಲ್ಲೂ ಹಸ್ತಕ್ಷೇಪ ನಡೆಸಿಹಿರಿಯ ಶಾಸಕರಿಗೆ ಒಲ್ಲದ ಖಾತೆಗಳನ್ನು ಕೊಡಿಸುವ ಮೂಲಕ ಅವರು ಪರೋಕ್ಷವಾಗಿ ಯಡಿಯೂರಪ್ಪನವರ ವಿರುದ್ದ ಮುನಿಸಿಕೊಳ್ಳುವಂತೆ ಮಾಡಲಾಯಿತು. ಕೇಂದ್ರ ಸರಕಾದಿಂದ ನೀಡಬೇಕಾದ ನೆರೆ ಪರಿಹಾರವನ್ನು ನೀಡದೆ ರಾಜ್ಯದ ಜನತೆಯಲ್ಲೂ ಯಡಿಯೂರಪ್ಪ ಅಸಮರ್ಥರು ಎಂದು ಬಿಂಬಿಸುವ ಪ್ರಯತ್ನ ಮಾಡಲಾಯಿತು.ಕೊವಿಡ್ ಸಂದರ್ಭದಲ್ಲೂ
ಯಡಿಯೂರಪ್ಪನವರಿಗೆ ಹಿನ್ನಡೆಯಾಗುಂತೆ ಮಾಡುವ ಪ್ರಯತ್ನ ನಡೆಸಲಾಯಿತು.ಉಪಮುಖ್ಯಮಂತ್ರಿಗಳಿಂದಾಗಲಿ, ಮಂತ್ರಿಗಳಿಂದಾಗಲಿ ಸರಿಯಾಗಿ ಸಹಕಾರ ಸಿಗದಂತೆ ನೋಡಿಕೊಳ್ಳಲಾಯಿತು. ತಮ್ಮ ಸುದೀರ್ಘ ರಾಜಕೀಯ ಅನುಭವವನ್ನು ಪಣಕ್ಕಿಟ್ಟು ಆಡಳಿತ ನಡೆಸುತ್ತಿರುವ ಯಡಿಯೂರಪ್ಪ ನೆರೆ ಸಂದರ್ಭದಲ್ಲಿ ಮಾಡಿದಂತೆ ಕೊವಿಡ್ ಸಂದರ್ಭದಲ್ಲೂ ಏಕಾಂಗಿಯಾಗಿ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆ ಗಳಿಸಿದರು.


ಯಡಿಯೂರಪ್ಪನವರನ್ನು ಹೇಗಾದರೂ ಸರಿ ಗದ್ದುಗೆಯಿಂದ ಇಳಿಸಬೇಕು ಎಂದು ಹೊರಟಿರುವ ಹೈಕಮಾಂಡ್ ಭಿನ್ನಮತದ ಅಸ್ತ್ರವನ್ನು ಪ್ರಯೋಗಿಸುತ್ತಿದೆ ಎಂಬುದು ಗುಟ್ಟೇನಲ್ಲ. ಹಿರಿಯ ಶಾಸಕ ಉಮೇಶ ಕತ್ತಿಯವರಿಗೆ ಮಂತ್ರಿ ಮಾಡಲು ಅಡ್ಡಗಾಲು ಹಾಕಿದ್ದ ಬಿಜೆಪಿ ಹೈಕಮಾಂಡ್ ಈಗ ಅದೇ ಕತ್ತಿ ಯಡಿಯೂರಪ್ಪನವರ ವಿರುದ್ದ ಝಳುಪಿಸುವಂತೆ ಮಾಡುತ್ತಿದೆ.
ಆದ್ಯೋತ್ ನ್ಯೂಸ್ ಗೆ ಬಂದ ಬಿಜೆಪಿ ಮೂಲದ ಮಾಹಿತಿಯ ಪ್ರಕಾರ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಸಹಕರಿಸಿದರೆ ಉಮೇಶಕತ್ತಿಯವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಬಸವರಾಜ ಯತ್ನಾಳರಿಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿ ಪದವಿಯನ್ನು ನೀಡುವ ಭರವಸೆ ನೀಡಲಾಗಿದೆಯಂತೆ. ಆದರೆ ಯಡಿಯೂರಪ್ಪನವರ ರಾಜಕೀಯದ ಚದುರಂಗದಾಟ ಯಾವ ರೀತಿಯಲ್ಲಿ ಅವರ ಅಧಿಕಾರವನ್ನು ಉಳಿಸುತ್ತದೆ ಕಾದು ನೋಡಬೇಕಾಗಿದೆ.
ಮೆ28 ರಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ವಿಧಾನಸೌಧದಲ್ಲಿ ಸರ್ವಪಕ್ಷಗಳ ಸಭೆ ಕರೆದು ಪಕ್ಷಾಂತರ ನಿಷೇಧ ಕಾಯ್ದೆಯಲ್ಲಿನ ಲೋಪ ದೋಷಗಳ ಕುರಿತು ಅದರ ತಿದ್ದು ಪಡಿಯ ಕುರಿತು ಸಲಹೆ ಸೂಚನೆಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು. ಅದಾದ ಎರಡೇ ದಿನದಲ್ಲಿ ಅದೇ ಪಕ್ಷಾಂತರ ಕಾಯ್ದೆಯಡಿಯಲ್ಲಿಯೇ ಮುಖ್ಯಮಂತ್ರಿಗಳನ್ನು ಇಳಿಸಲು ಹೊರಟಿರುವುದು ವ್ಯಂಗ್ಯವಲ್ಲದೆ ಇನ್ನೇನು?

About the author

Adyot

Leave a Comment