ಶಿರಸಿ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ಬಿಚ್ಚಿಟ್ಟ ಅನಂತಮೂರ್ತಿ ಹೆಗಡೆ

ಆದ್ಯೊತ್ ಸುದ್ದಿನಿಧಿ:
ಶಿರಸಿ ತಾಲೂಕಿನ ಬನವಾಸಿ ವ್ಯಾಪ್ತಿಯ ಸಹಸ್ರಹಳ್ಳಿಯಲ್ಲಿ ಬಾಲಕನೊಬ್ಬ ಹಾವು ಕಚ್ಚಿ ಸಾವನ್ನಪ್ಪಿದ್ದು, “ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯತನದಿಂದಲೇ ನಾನು ನನ್ನ ಮಗನನ್ನು ಕಳೆದುಕೊಂಡೆ. ಇಲ್ಲದಿದ್ದರೆ ನನ್ನ ಮಗ ಬದುಕುತ್ತಿದ್ದ” ಎಂದು ಮೃತ ಬಾಲಕನ ತಂದೆ ಪುಟ್ಟಪ್ಪ ನಾಯ್ಕ ತಮ್ಮ ನೋವನ್ನು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಎದುರು ಎಳೆಎಳೆಯಾಗಿ ಬಿಚ್ಚಿಟ್ಟರು.

“ರಾತ್ರಿ ಮಕ್ಕಳಿಗೆ ಹಾವು ಕಚ್ಚಿರುವುದು ನಮಗೆ ಗೊತ್ತಿರಲಿಲ್ಲ. ಇಬ್ಬರೂ ಮಕ್ಕಳಿಗೆ ವಾಂತಿ ಶುರುವಾದಾಗ, ಊಟ ತಿಂಡಿಯಲ್ಲಿ ಏನಾದರೂ ವ್ಯತ್ಯಾಸವಾಗಿರಬಹುದು ಎಂದು ಸುಮ್ಮನಾಗಿದ್ದೆವು. ಆದರೆ ಮನೆಯ ಪಕ್ಕದಲ್ಲಿ ಹಾವು ಹರಿದು ಹೋಗುತ್ತಿರುವುದನ್ನು ಗಮನಿಸಿದೆವು. ಇಬ್ಬರಲ್ಲೂ ವಾಂತಿ ಜಾಸ್ತಿಯಾದಾಗ ತಕ್ಷಣ, ಬೆಳಗಿನ ಜಾವ 4:45ರ ಸುಮಾರಿಗೆ ಶಿರಸಿಯ ಪಂಡಿತ ಸರ್ಕಾರಿ ಆಸ್ಪತ್ರೆಗೆ ಮಗ ಹಾಗೂ ಮಗಳನ್ನು ಕರೆದುಕೊಂಡು ಬಂದೆ. ಆಸ್ಪತ್ರೆಗೆ ಬಂದಾಗ ಅಲ್ಲಿ ಯಾರೂ ಇರಲಿಲ್ಲ. ಆಸ್ಪತ್ರೆಯ ಹೊರಗಡೆ ಬೀಡಾಡಿ ದನಗಳು ಮಲಗಿದ್ದವು. ಒಳಗಡೆ ಹೋಗಿ ನೋಡಿದರೆ ವೈದ್ಯರೇ ಇರಲಿಲ್ಲ. ನಂತರ 10 ನಿಮಿಷ ತಡವಾಗಿ ನಿದ್ರೆಯ ಮಂಪರಿನಲ್ಲಿ ಬಂದ ವೈದ್ಯರು ಚಿಕಿತ್ಸೆ ನೀಡಲು ಮುಂದಾದರು. ಮಗನ ಕಿವಿಯ ಹತ್ತಿರ ಏನೋ ಕಚ್ಚಿದ ಗಾಯವಾಗಿದೆ ಎಂದು ನಾನು ಹೇಳಿದರೂ ಅವರು ನಿರ್ಲಕ್ಷ್ಯ ತೋರಿದರು. ಅವರಿಗೆ ಹಾವು ಕಚ್ಚಿದೆ ಎಂಬ ಕನಿಷ್ಠ ಜ್ಞಾನವೂ ಇರಲಿಲ್ಲ” ಎಂದು ಪುಟ್ಟಪ್ಪ ಅಳಲು ತೋಡಿಕೊಂಡರು.

“ವೈದ್ಯರು ಇಬ್ಬರಿಗೂ ಚಿಕಿತ್ಸೆ ನೀಡಿದ ಕೆಲ ಸಮಯದ ನಂತರ ಮಗ ಒಮ್ಮೆಲೇ ಮೇಲೆ ಎದ್ದು, ಹಾಗೇ ಮಲಗಿದ. ತಕ್ಷಣ ವೈದ್ಯರು ಕಾರವಾರ ಅಥವಾ ಹುಬ್ಬಳ್ಳಿಗೆ ಕರೆದುಕೊಂಡು ಹೋಗುವಂತೆ ಹೇಳಿದರು. ಅಲ್ಲಿಂದ ನಾವು ಶಿರಸಿಯ ಮಹಾಲಕ್ಷ್ಮಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಅಲ್ಲಿದ್ದ ವೈದ್ಯರು ಪರೀಕ್ಷೆ ಮಾಡಿ, ಮಗ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದರು. ಮಗಳಿಗೂ ಹಾವು ಕಚ್ಚಿದ್ದು ಬದುಕುವುದು ಕಷ್ಟ ಎಂದರು. ಆದರೆ ಸೂಕ್ತ ಚಿಕಿತ್ಸೆಯ ನಂತರ ಮಗಳು ಗುಣಮುಖಳಾದಳು. ಆದರೆ ಮಗನನ್ನು ಕಳೆದುಕೊಂಡೆ. ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಮೊದಲೇ ಬೇರೆ ಆಸ್ಪತ್ರೆಗೆ ಹೋಗಿದ್ದರೆ ನನ್ನ ಮಗ ಬದುಕುಳಿಯುತ್ತಿದ್ದ” ಎಂದು ಕಣ್ಣೀರಿಟ್ಟರು.

“ಸರ್ಕಾರಿ ಆಸ್ಪತ್ರೆಗೆ ಶೀತ, ಜ್ವರ ಬಂದವರು ಮಾತ್ರ ಹೋಗಬೇಕು. ತುರ್ತು ಚಿಕಿತ್ಸೆಗೆ ಹೋದರೆ ರೋಗಿಗಳು ಬದುಕುವುದು ಕಷ್ಟ. ಪ್ರಾಣ ಬಿಡಬೇಕೆಂದಿದ್ದರೆ ಮಾತ್ರ ಅಲ್ಲಿಗೆ ಹೋಗಬೇಕು, ಬದುಕುವ ಆಸೆ ಇದ್ದರೆ ಆ ಆಸ್ಪತ್ರೆಗೆ ಹೋಗಬಾರದು. ನನ್ನ ಮಗನಿಗೆ ಸರಿಯಾದ ವೇಳೆಯಲ್ಲಿ ವೈದ್ಯರು ಸ್ಪಂದಿಸಿ ಚಿಕಿತ್ಸೆ ನೀಡಿದ್ದರೆ ಆತ ಬದುಕುತ್ತಿದ್ದ. ನನಗಾದ ಈ ದುರ್ಗತಿ ಇನ್ಯಾರಿಗೂ ಆಗಬಾರದು” ಎಂದು ಪುಟ್ಟಪ್ಪ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.


ಮಗನನ್ನು ಕಳೆದುಕೊಂಡು ದುಃಖದಲ್ಲಿದ್ದ ತಂದೆಯ ಅಳಲನ್ನು ಆಲಿಸಿದ ಅನಂತಮೂರ್ತಿ ಹೆಗಡೆ ಸಾಂತ್ವನ ಹೇಳಿ, “ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಪುತ್ರಶೋಕ ನಿರಂತರವಾದದ್ದು, ನಿಮ್ಮ ಪತ್ನಿಗೆ ಹಾಗೂ ನಿಮಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ, ನಿಮ್ಮ ಜೊತೆ ನಾವಿರುತ್ತೇವೆ” ಎಂದ
ಅನಂತಮೂರ್ತಿ ಹೆಗಡೆ,ದುಃಖದಲ್ಲಿದ್ದ ಮೃತ ಬಾಲಕ ಮಿಥುನನ ತಂದೆಗೆ ಆರ್ಥಿಕ ನೆರವು ನೀಡಿದರು. ಅಲ್ಲದೆ, ಆಸ್ಪತ್ರೆಯಲ್ಲಿರುವ ಮಗಳ ಮುಂದಿನ ಚಿಕಿತ್ಸೆಗೆ ಏನಾದರೂ ಹಣಕಾಸಿನ ಸಮಸ್ಯೆಯಾದರೆ ತಕ್ಷಣ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿ ಧೈರ್ಯ ತುಂಬಿದರು.

About the author

Adyot

Leave a Comment