ಆದ್ಯೊತ್ ಸುದ್ದಿನಿಧಿ:
ಹೊನ್ನಾವರ ತಾಲೂಕಿನ ಮಾಳ್ಕೋಡ-ಕೆಳಗಿನ ಇಡಗುಂಜಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ದಾಪುರದ ಆಧಾರ ಶಿಕ್ಷಣ, ಸ್ವ-ಉದ್ಯೋಗ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಶೈಕ್ಷಣಿಕ ವರ್ಷಕ್ಕೆ ಬೇಕಾಗುವ ಕಲಿಕಾ ಸಾಮಗ್ರಿ ಹಾಗೂ ಛತ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರಶಿಕ್ಷಣಾಧಿಕಾರಿ ಜಯಶ್ರಿ ನಾಯ್ಕ ಮಾತನಾಡಿ,ಸರಕಾರ ಇಂದು ವಿವಿಧ ಯೋಜನೆಗಳ ಮೂಲಕ ಸರಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಿದೆ.ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಆದರೂ ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಒಟ್ಟಾರೆ ಬೆಳವಣಿಗೆಯಲ್ಲಿ ಸ್ಥಳೀಯರ,ಧಾನಿಗಳ ಸಹಕಾರ ಮುಖ್ಯವಾಗುತ್ತದೆ ಎಂದು
ಹೇಳಿದರು.

ಆಧಾರ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯ್ಕ ಮಾಳಕೋಡ ಮಾತನಾಡಿ,ಇಂದು ಶಿಕ್ಷಕರುಗಳಿಗೆ ಇತರೆ ಸಾಮಾಜಿಕ ಕರ್ತವ್ಯಗಳಿಂದ ಮುಕ್ತಿಗೊಳಿಸಬೇಕು.ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ ನಮೂನೆ ತುಂಬುವ ಕೆಲಸವೆ ಹೆಚ್ಚಾಗಿದೆ.ಬೋಧಕೇತರ ಸಿಬ್ಬಂದಿ ನೇಮಕಗೊಳಿಸಿ,ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಪಾಠ ಮಾಡುವಂತೆ ಆಗಬೇಕು ಎಂದು ಹೇಳಿದರು

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಈ ಶಾಲೆಯು ಇಂದು ಉತ್ತಮ ರೀತಿಯಲ್ಲಿ ಬೆಳವಣಿಗೆ ಕಂಡಿದೆ.ಆಧಾರ ಸಂಸ್ಥೆಯವರು ಪ್ರತಿವರ್ಷವೂ ಎಲ್ಲಾ ಮಕ್ಕಳಿಗೂ ಶೈಕ್ಷಣಿಕ ಸಾಮಗ್ರಿ ನೀಡುತ್ತಿದ್ದು,ಈ ವರ್ಷ ಛತ್ರಿಗಳನ್ನು ನೀಡುತ್ತಿರುವುದು ಹೆಚ್ಚು ಅನುಕೂಲವಾಗುವಂತಿದೆ.ವಿದ್ಯಾರ್ಥಿಗಳು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಭಾಗೀಯ ನಿವೃತ್ತ ಪರಿಸರ ಅಧಿಕಾರಿ ವಿಜಯಾ ಹೆಗಡೆ ಮಾತನಾಡಿ, ಇಂದು ಮಕ್ಕಳಿಗೆ ಕಲಿಕೆಗೆ ಬೇಕಾಗುವ ಎಲ್ಲಾ ಅಗತ್ಯ ಸೌಲಭ್ಯ ಕಲ್ಪಿಸುವ ಕಾರ್ಯ ಆಗುತ್ತಿದೆ. ಮಕ್ಕಳು ಓದುವುದಕ್ಕೆ ಕಂಜೂಸ್ ಮಾಡದೆ ಉತ್ತಮ ರೀತಿಯಲ್ಲಿ ಅಭಾಸ ಮಾಡಿ ಸಾಧನೆ ಮಾಡಬೇಕಾಗಿದೆ ಎಂದರು.ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ಸುಧೀಶ ನಾಯ್ಕ, ಗ್ರಾಮ ಪಂಚಾಯತ ನಿಕಟಪೂರ್ವ ಉಪಾಧ್ಯಕ್ಷ ಗೋಪಾಲ ಜಟ್ಟಿ ನಾಯ್ಕ ಮಾತನಾಡಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ರಾಜೇಶ ಎಂ.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಮಂಜುನಾಥ ಬಿಳಿಯ ನಾಯ್ಕ,ಶಾಲಾ ಶತಮಾನೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುರೇಶ ಜಿ.ಹೆಗಡೆ,ಎಸ್.ಡಿ.ಎಂ.ಸಿ ಯ ಲಕ್ಸ್ಮಿ ನಾಯ್ಕ ಉಪಸ್ಥಿತರಿದ್ದರು.
