ಆದ್ಯೊತ್ ಸುದ್ದಿನಿಧಿ;
ಕಾಂಗ್ರೆಸ್ ಹೇರಿದ ತುರ್ತು ಪರಿಸ್ಥಿತಿಯ ಕರಾಳ ಅಧ್ಯಾಯಕ್ಕೆ 51 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಜಿಲ್ಲಾ ಕಾರ್ಯಾಲಯ ದೀನದಯಾಳ ಭವನ ಶಿರಸಿಯಲ್ಲಿ ‘ಸಂವಿಧಾನ ಹತ್ಯಾದಿನ‘ ಕಾರ್ಯಕ್ರಮ ಏರ್ಪಡಿಸಲಾಗಿತ್ತು.


ಆಗಿನ ಪ್ರಧಾನಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಹೋರಾಟ ಮಾಡಿ ಬಂದನಕ್ಕೊಳಗಾದ ನಾರಾಯಣ ಭಾಸ್ಕರ ಭಟ್ ಗದ್ದೆಮನೆ, ವೆಂಕಟ್ರಮಣ ಸೀತಾರಾಮ ಹೆಗಡೆ ಕೆಸರಕೊಪ್ಪರವರಿಗೆ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ವಕ್ತಾರ ಆರೆಸ್ಸೆಸ್ ಶಿರಸಿ ವಿಭಾಗ ವ್ಯವಸ್ಥಾ ಪ್ರಮುಖ ಸತ್ಯನಾರಾಯಣ ಭಟ್, ತುರ್ತು ಪರಿಸ್ಥಿತಿ ಕರಾಳ ಇತಿಹಾಸದ ನೆನಪು ಮಾಡಿಕೊಟ್ಟರು.
ತನ್ನ ಅಧಿಕಾರ ಉಳಿಸಿಕೊಳ್ಳುವ ‘ಸೆನ್ಸ್ ಆಫ಼್ ಎಂಟೈಟಲ್ಮೆಂಟ್’ಗೋಸ್ಕರ ತುರ್ತು ಪರಿಸ್ಥಿತಿಯನ್ನು ಇಂದಿರಾಗಾಂಧಿ ಹೇರಿದರು. ದೇಶದ ಒಳಿತು, ಪ್ರಜಾಹಿತ ಲೆಕ್ಕಿಸದೆ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಈ ನಿರ್ಧಾರ ಕೈಗೊಂಡರು ಎಂದರು.


ಪತ್ರಿಕಾ ನಿರ್ಬಂಧ ಮತ್ತು ಕಾನೂನಿನ ಮೂಲಕವೂ ಪ್ರಶ್ನೆ ಮಾಡಲು ಆಗದಂತೆ ಸಂವಿಧಾನ ತಿದ್ದುಪಡಿ ಮಾಡಿದ್ದು ಕರಾಳ ಇತಿಹಾಸ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಮತ್ತು ಜನಸಂಘದ ಕಾರ್ಯಕರ್ತರು ದೇಶ ಮೊದಲು ಎಂಬ ಭಾವನೆಯಿಂದ ಹೋರಾಡಿದರು. ‘ಜೈಲ್ ಭರೋ’ದಂತಹ ಪ್ರತಿಭಟನೆ, ಸರ್ಕಾರಿ ಸಭೆಗಳಿಗೆ ತೆರಳಿ ಧಿಕ್ಕರಿಸುವ ಮೂಲಕ ಪ್ರತಿಭಟಿಸಿ ಸರ್ವಾಧಿಕಾರಿ ಧೋರಣೆಗೆ ವಿರೋಧ ವ್ಯಕ್ತಪಡಿಸಿದರು ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಕರ್ಕಿ ಪ್ರಸ್ತಾವಿಕ ಮಾತನಾಡಿ, ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ಕಗ್ಗೊಲೆ ಮಾಡಿದ ಕಾಂಗ್ರೆಸ್ ಸಂವಿಧಾನದ ರಕ್ಷಕನಂತೆ ಮುಖವಾಡ ದರಿಸಿ ಓಡಾಡುವುದು ಹಾಸ್ಯಾಸ್ಪದ ಜನರಿಗೆ ನೈಜ ಇತಿಹಾಸದ ಜಾಗೃತಿ ಮೂಡಿಸುವ ಕಾರ್ಯವನ್ನು ಸಂವಿಧಾನ ಹತ್ಯಾ ದಿನದ ಮೂಲಕ ಮಾಡುತ್ತಿದ್ದೇವೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಸ್ವಾಗತಿಸಿದರು ಮತ್ತು ಪ್ರಶಾಂತ ನಾಯ್ಕ ವಂದಿಸಿದರು. ವಿಭಾಗ ಪ್ರಭಾರಿ ಆರ್ ಡಿ ಹೆಗಡೆ, ಜಿಲ್ಲಾ ಉಪಾಧ್ಯಕ್ಷ ಅಶೋಕ ಛಲವಾದಿ ಹಾಗೂ ಪ್ರಭಾವತಿ ಗೌಡ, ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
