ಸಿದ್ದಾಪುರ ವಿದ್ಯುತ್ ಗುತ್ತಿಗೆದಾರರ ಸಂಘದಿಂದ ಸಹಾಯಧನ ವಿತರಣೆ,ಸನ್ಮಾನ

ಆದ್ಯೊತ್ ಸುದ್ದಿನಿಧಿ
ಸಿದ್ದಾಪುರ ಪಟ್ಟಣದ ಎಪಿಎಂಸಿಯಲ್ಲಿ ಸ್ಥಳೀಯ ಕರ್ನಾಟಕರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದಿಂದ ರವಿವಾರ ಕಳೆದ ಎರಡು ವರ್ಷದ ಹಿಂದ ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಮರಣ ಹೊಂದಿದ್ದ ಕೆಲಸಗಾರನ ಕುಟುಂಬಕ್ಕೆ ಸಹಾಯಧನ ವಿತರಣೆ ಮತ್ತು ಸಾಧಕನಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಪ್ರದೀಪ ಗುನಗಿ ಮಾತನಾಡಿ,ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಯಶಸ್ಸು ಪಡೆಯಲು ಸಾಧ್ಯ. ಇಲಾಖೆಯ ಜೊತೆಗೆ ನಮ್ಮ ಸಂಬಂಧ ಸೌಹಾರ್ದತೆಯಿಂದ ಇರಬೇಕು ಹಾಗಂತ ಯಾರೂ ನಮ್ಮ ಮೇಲೆ ಸವಾರಿ ಮಾಡದಂತೆ ಎಚ್ಚರಿಕೆವಹಿಸಬೇಕು. ನಮ್ಮ ಕೆಲಸಗಳು ಕಷ್ಟದಾಯಕವಾಗಿದೆ. ನಮಗೆ ಹಾಗೂ ನಮ್ಮ ಜೊತೆಗೆ ಕೆಲಸ ಮಾಡುವ ಕೆಲಸಗಾರರಿಗೆ ಅಪಾಯ ಇರುತ್ತದೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಭದ್ರತೆಯೂ ನಮಗಿರುವುದಿಲ್ಲ. ಕೆಲಸ ಮಾಡುತ್ತಿದ್ದಾಗ ಮರಣ ಹೊಂದಿದ ಕೆಲಸಗಾರನ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುತ್ತಿರುವ ಸಿದ್ದಾಪುರ ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಹೆಸ್ಕಾಂ ಕಾರ್ಯನಿರ್ವಾಹಕ ಇಂಜನೀಯರ್ ನಾಗರಾಜ ಪಾಟೀಲ ಮಾತನಾಡಿ, ಗುತ್ತಿಗೆದಾರರು ಮತ್ತು ಇಲಾಖೆ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಪರಸ್ಪರ ಸಮನ್ವಯತೆಯಿಂದ ಕೆಲಸ ಮಾಡಿದರೆ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ. ಗುತ್ತಿಗೆದಾರರಲ್ಲಿ ಇಲಾಖೆಯ ಏಜಂಟರಲ್ಲ ಅವರು ಇಲಾಖೆಯ ಜೊತೆಗೆ ಕೈಜೋಡಿಸಿ ಕೆಲಸ ಮಾಡುವವರು ಕೆಲಸ ಮಾಡುವಾಗ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಗುತ್ತಿಗೆದಾರರಿಗೆ ಇಲಾಖೆಯಿಂದ ಯಾವುದೇ ತರಹದ ತೊಂದರೆಯಾಗದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.


ಪ್ರಾಸ್ತಾವಿಕ ಮಾತನಾಡಿದ ಹಿರಿಯ ಗುತ್ತಿಗೆದಾರ ಸುದರ್ಶನ ಪಿಳ್ಳೆ, ಪ್ರತಿವರ್ಷ ನಮ್ಮ ಸಂಘದಿಂದ ಸ್ಥಳೀಯ ಅಂಧರಶಾಲೆಗೆ ಅವಶ್ಯಕವಸ್ತುಗಳನ್ನು ನೀಡಲಾಗುತ್ತಿತ್ತು ಕಳೆದ ಮೂರು ವರ್ಷದಿಂದ ಹಲವಾರು ಕಾರಣಗಳಿಂದ ಯಾವುದೇ ಕಾರ್ಯಕ್ರಮ ನಡೆಸಲು ಸಾಧ್ಯವಾಗಿರಲಿಲ್ಲ. ಎರಡು ವರ್ಷದ ಹಿಂದೆ ವಿದ್ಯುತ್ ಕೆಲಸ ಮಾಡುತ್ತಿರುವಾಗ ಮೃತಪಟ್ಟ ಮೆಣಸಿ ಗ್ರಾಮದ ದೇವರಾಜ ನಾಯ್ಕ ಕುಟುಂಬಕ್ಕೆ ಒಂದುಲಕ್ಷರೂ. ಆರ್ಥಿಕ ಸಹಾಯವನ್ನು ನೀಡಲಾಗುತ್ತಿದೆ ಹಾಗೂ ನಮ್ಮ ಸಂಘದ ಸದಸ್ಯ ವಿನಾಯಕ ನಾಯ್ಕ ಕೊಂಡ್ಲಿಯವರು ಪ್ರತಿಭಾವಂತ ನಟರಾಗಿದ್ದು ಇತ್ತೀಚೆಗೆ ಅವರಿಗೆ ರಾಜ್ಯಮಟ್ಟದ ಬಸವಭೂಷಣ ಪ್ರಶಸ್ತಿ ದೊರಕಿದೆ ಅವರನ್ನು ಸನ್ಮಾನಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.


ಸಭೆಯಲ್ಲಿ ಉಪಸ್ಥಿತರಿದ್ದ ವಿದ್ಯುತ್ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಅಧ್ಯಕ್ಷತೆವಹಿಸಿದ್ದ ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಯೋಗಿಶ ಗೌಡ,ಸನ್ಮಾನಿತ ವಿನಾಯಕ ನಾಯ್ಕ ಕೊಂಡ್ಲಿ ಮಾತನಾಡಿದರು. ವಿದ್ಯುತ್ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ ವಿದ್ಯುತ್ ಪ್ರವಹಿಸಿ ಮರಣ ಹೊಂದಿದ್ದ ದೇವರಾಜ ನಾಯ್ಕರ ತಂದೆ-ತಾಯಿಗಳಿಗೆ ಒಂದುಲಕ್ಷರೂ. ಚೆಕ್‌ನ್ನು ನೀಡಲಾಯಿತು. ಎಂ.ಟಿ.ಗೌಡ ನಿರೂಪಣೆ ಮಾಡಿದರು.

About the author

Adyot

Leave a Comment