ಆದ್ಯೊತ್ ಸುದ್ದಿನಿಧಿ:
ಬೆಂಗಳೂರಿನಲ್ಲಿ ಕೆಪಿಎಸ್ಸಿ ನೇಮಕಾತಿ ಹಗರಣದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಎಬಿವಿಪಿ ಕಾರ್ಯಕರ್ತರ ಹಾಗೂ ವಿದ್ಯಾರ್ಥಿಗಳನ್ನು ಅಮಾನವೀಯ ರೀತಿಯಲ್ಲಿ ಎಳೆದಾಡಿ ಬಂಧಿಸಿರುವ ಪೊಲೀಸ್ ಕ್ರಮ ಸಹಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳ ಹಾಗೂ ಉದ್ಯೋಗಾಕಾಂಕ್ಷಿಗಳ ನ್ಯಾಯಯುತ ಬೇಡಿಕೆಯನ್ನು ಹತ್ತಿಕ್ಕುವ ರಾಜ್ಯ ಕಾಂಗ್ರೆಸ್ ಸರ್ಕಾರದ ದಮನಕಾರಿ ನಡೆಗೆ ಯುವ ಸಮೂಹ ಮುಂದೆ ತಕ್ಕ ಉತ್ತರ ನೀಡಲಿದೆ
ಬಿಜೆಪಿ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಗುರುಪ್ರಸಾದ ಹೆಗಡೆ ಹರ್ತೆಬೈಲ್
ಹೇಳಿದ್ದಾರೆ.


ಈ ಕುರಿತು ಅವರು ಪತ್ರಿಕಾ ಪ್ರಕಟಣೆ ನೀಡಿದ್ದು,
ವರ್ಷಾನುಗಟ್ಟಲೆ ಕಷ್ಟಪಟ್ಟು ಉದ್ಯೋಗ ಸಿಕ್ಕರೆ ಕುಟುಂಬಕ್ಕೊಂದು ಆಧಾರ ಎಂದು ಕಾದಿದ್ದ, ಬಡ ಹಾಗೂ ಮಧ್ಯಮ ವರ್ಗದ ಯುವಕ-ಯುವತಿಯರಿಗೆ ಈ ಭ್ರಷ್ಟ ಸರ್ಕಾರ ದ್ರೋಹ ಮಾಡಿದೆ. ಹೋರಾಟಗಾರರ ಅಹವಾಲು ಆಲಿಸುವುದು ಬಿಟ್ಟು, ಸಚಿವ ಪದವಿ ಉಳಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ.ಪ್ರತಿಭಟನಾ ನಿರತ ವಿದ್ಯಾರ್ಥಿನಿಯರನ್ನು ಎಳೆದಾಡಿರುವ ಪೊಲೀಸ್ ದರ್ಪ ಸಹಿಸಲು ಸಾಧ್ಯವಿಲ್ಲ.ಸಂವಿಧಾನ,ಪ್ರಜಾಪ್ರಭುತ್ವ ಮತ್ತು ಆಜಾದಿ ಕೂಗು ಹಾಕುವ ಕಾಂಗ್ರೆಸ್ಸಿಗರ ಆಡಳಿತದಲ್ಲಿ ವಿದ್ಯಾರ್ಥಿಗಳ ಗೋಳು ಯಾರೂ ಕೇಳುವರಿಲ್ಲ, ಯುವಕರ ಕಷ್ಟ ಆಲಿಸುವವರಿಲ್ಲ ಎಂದು ಹೇಳಿದ್ದಾರೆ.



ಈ ಸರ್ಕಾರ ಯುವಕರಿಗೆ ಉದ್ಯೋಗ ನೀಡಿಲ್ಲ, ಯುವನಿಧಿ ಬರಲೇ ಇಲ್ಲ ಮತ್ತು ಕಾಂಗ್ರೆಸ್ಸಿನ ಗ್ಯಾರಂಟಿ ಚುನಾವಣಾ ಸಮಯದ ಗೋರಂಟಿ ಆಗಿತ್ತು ಎನ್ನುವುದು ಮತ್ತೆ ಮತ್ತೆ ಸ್ಪಷ್ಟವಾಗುತ್ತಿದೆ. ಎಲ್ಲದಕ್ಕೂ ಮೂಗು ತೂರಿಸುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೆಪಿಎಸ್ಸಿ ಕರ್ಮಕಾಂಡದ ಬಗ್ಗೆ ಮಾತನಾಡಲಿ, ನಾಪತ್ತೆಯಾಗಿರುವ ಐಎಎಸ್ ಅಧಿಕಾರಿಯ ಬಗ್ಗೆ ಸತ್ಯ ಹೇಳಲಿ. ಪೊಲೀಸ್ ವಶದಲ್ಲಿರುವ ಎಬಿವಿಪಿ ಕಾರ್ಯಕರ್ತರ ಬಿಡುಗಡೆ ಮಾಡಬೇಕು, ಈ ಪ್ರಕರಣದಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ನ್ಯಾಯ ಒದಗಿಸಬೇಕೆ ಹೊರತು ಹೋರಾಟವನ್ನು ಹತ್ತಿಕ್ಕುವುದಲ್ಲ ಎಂದು ಅವರು ಕಿಡಿಕಾರಿದ್ದಾರೆ.

