ಸಿದ್ದಾಪುರ ಮುರೂರಿನ ಸುಶೀಲಾ ಹೆಗಡೆಗೆ ಕರ್ನಾಟಕ ನಾಟಕ ಅಕಾಡಮಿಯ ವಾರ್ಷಿಕ ಪ್ರಶಸ್ತಿ

ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ತಾಲ್ಲೂಕಿನ ಹೆಗ್ನೂರು ಸಮೀಪದ ಮುರೂರಿನ ಸುಶೀಲಾ ಹೆಗಡೆ ಯವರಿಗೆ ಕರ್ನಾಟಕ ನಾಟಕ ಅಕಾಡಮಿಯ 2026-27 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಲಭಿಸಿದೆ.

ಸುಶೀಲಾ ಹೆಗಡೆ ಕಳೆದ ನಲವತ್ತು ವಷ೯ದಿಂದ ರಂಗಕಲಾವಿದೆಯಾಗಿ, ನಿರ್ದೇಶಕಿಯಾಗಿ, ವಸ್ತ್ರವಿನ್ಯಾಸಗಾರ್ತಿಯಾಗಿ, ಬೆಳಕಿನ ವಿನ್ಯಾಸಕಿಯಾಗಿ ರಾಜ್ಯದ ಹಲವಾರು ಕಡೆ ಕಾರ್ಯ ನಿರ್ವಹಿಸಿದ್ದಾರೆ. ತುಮರಿಯ ಯಕ್ಷಗಾನ ಕಲಾಕೇಂದ್ರದಲ್ಲಿ ಮೂರು ವರುಷ ತರಬೇತಿ ಪಡೆದ ಇವರು ಯಕ್ಷಗಾನದ ಕಲಾವಿದೆಯಾಗಿ ಅನೇಕ ಪ್ರದರ್ಶನಗಳನ್ನು ಕೊಟ್ಟಿರುತ್ತಾರೆ.
1988-89ನೇ ಸಾಲಿನಲ್ಲಿ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ರಂಗಪದವಿ ಪಡೆದಿದ್ದಾರೆ.


ನಂತರ ನೀನಾಸಮ್ ತಿರುಗಾಟ ಮತ್ತು ನೀನಾಸಮ್ ಬಳಗದಲ್ಲಿ ನಟಿಯಾಗಿ, ಹಿನ್ನೆಲೆ ತಾಂತ್ರಿಕ ವಿಭಾಗಗಳಾದ ಬೆಳಕು ಸಂಯೋಜನೆ, ಪ್ರಸಾಧನ, ವಸ್ತ್ರವಿನ್ಯಾಸಕಿಯಾಗಿಯೂ ಕೆಲಸ ಮಾಡಿದ್ದಾರೆ.
ಪ್ರಸಿದ್ಧ ನಿರ್ದೇಶಕರಾದ ಪ್ರಿಟ್ಸ್ ಬೆನೆವಿಡ್ಸ್, ಕೆ.ಜಿ ಕೃಷ್ಣಮೂರ್ತಿ,ರುಸುಂ ಭರೂಚ, ಬಸವಲಿಂಗಯ್ಯ, ರಘುನಂದನ, ಅಕ್ಷರ ಕೆ.ವಿ, ಚಿದಂಬರ್ ರಾವ್ ಜಂಬೆ, ಪ್ರಕಾಶ್ ಬೆಳವಾಡಿ, ವೆಂಕಟರಮಣ ಐತಾಳ್, ಸುರೇಶ್ ಆನಗಳ್ಳಿ, ಮುಂತಾದ ಪ್ರಸಿದ್ಧ ನಿರ್ದೇಶಕರೊಡನೆ ಕೆಲಸ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲಿತ್ತದೆ. ತುಘಲಕ್, ಅವಸ್ಥೆ, ರಾಜಾರಾಣಿ, ಕ್ರಮವಿಕ್ರಮ, ತಲಕಾಡುಗೊಂಡ, ಶಾಕುಂತಲಾ ಮುಂತಾದ 40ಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಇದಲ್ಲದೇ ಕಿನ್ನರ ಮೇಳ, ನೀನಾಸಮ್, ಮೈಸೂರು ರಂಗಾಯಣ ಇನ್ನೂ ಅನೇಕ ನಾಟಕ ತಂಡಗಳ ಜೊತೆ ನಟಿಯಾಗಿ, ವಸ್ತ್ರವಿನ್ಯಾಸಯಾಗಿ,ಕೆಲಸ ಮಾಡಿದ ಅನುಭವದ ಜೊತೆ ಹಲವಾರು ಮಕ್ಕಳ ನಾಟಕಗಳನ್ನೂ ನಿರ್ದೇಶಿಸಿರುವುದರ ಜೊತೆ ರಂಗಾಯಣ ಮೈಸೂರಿನಲ್ಲಿ ‘ಚಿಣ್ಣರ ಮೇಳ’ ಮುಂತಾದ ರಂಗ ಚಟುವಟಿಕೆಗಳಲ್ಲಿಯೂ ಸಕ್ರಿಯ ಕೆಲಸ ಮಾಡಿದ್ದಾರೆ. ಇವರ ಪತಿ ದಿವಂಗತ ಎಂ. ಪಿ. ಹೆಗಡೆಯವರು ಕೂಡ ಹಲವಾರು ನಾಟಕಗಳಿಗೆ ಸಂಗೀತ ಸಂಯೋಜಕರಾಗಿ ಕಾಯ೯ ನಿವ೯ಹಿಸಿದ್ದಾರೆ.


ಅಕಾಡೆಮಿ ಪ್ರಶಸ್ತಿ ಬಂದಿರುವುದು ಅನಿರೀಕ್ಷಿತವಾಗಿದೆ.ಯಾವುದೇ ನಿರೀಕ್ಷೆ ಇಲ್ಲದೇ ಸುಮಾರು 30 ವರ್ಷಗಳ ಕಾಲ ಕಲಾ ಸೇವೆಯನ್ನು ಮಾಡುತ್ತಾ ಬಂದಿದ್ದೇನೆ. ಇವತ್ತು ನಾನು ಈ ಹಂತಕ್ಕೆ ತಲುಪಲು ನೀನಾಸಂ ಮುಖ್ಯ ಕಾರಣ.ನೀನಾಸಂ ನನಗೆ ಎರಡನೇ ತವರು ಮನೆ ಇದ್ದಂತೆ. ನನ್ನ ಈ ಯಶಸ್ಸಿಗೆ ಕಾರಣೀಕರ್ತರಾದ ಪ್ರತಿಯೊಬ್ಬರಿಗೂ ನಾನು ಚಿರರುಣಿಯಾಗಿದ್ದೇನೆ ಎಂದು ಆದ್ಯೊತ್ ನ್ಯೂಸ್ ಗೆ ಸುಶೀಲಾ ಹೆಗಡೆ
ಪ್ರತಿಕ್ರಿಯೆ ನೀಡಿದ್ದಾರೆ.

About the author

Adyot

Leave a Comment