ಸಾವಿರ ಸವಾಲನ್ನು ಮೆಟ್ಟಿ ನಿಂತ ಸಾಧಕ

ಆದ್ಯೊತ್ ಸುದ್ದಿನಿಧಿ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಧನೆಯ ದಾರಿಯಲ್ಲಿ ಸಾಗುವ ಯುವಕರು ತುಂಬಾ ವಿರಳ. ಸಣ್ಣಪುಟ್ಟ ನೌಕರಿ ಸಿಕ್ಕರಂತೂ ಮುಗಿದೇ ಹೋಯ್ತು. ತಮ್ಮಲ್ಲಿ ಸಾಕಷ್ಟು ಪ್ರತಿಭೆ ಇದ್ದರೂ ಸಹ ಸಾಕಾ ಇದ್ದುದ್ರಲ್ಲೇ ಜೀವನ ಕಳದ್ರಾಯ್ತು ಅಂತಾ ಅಲ್ಪತೃಪ್ತಿಗೆ ಸಂತಸಪಟ್ಟು ತಮ್ಮ ಸಾಹಸದ ಹಾದಿಯಲ್ಲಿ ಮುನ್ನುಗ್ಗದೇ ನೈಜ ಜ್ಞಾನವನ್ನು ಹತ್ತಕ್ಕಿಬಿಡುತ್ತಾರೆ. ಆದರೆ ಈ ಯುವಕ ರಾಜೇಶನಿಗೆ ಒಂದಲ್ಲ ಎರಡಲ್ಲ ನಾಲ್ಕು ಸರಕಾರಿ ನೌಕರಿಗಳು ಮನೆಯ ಕಾಲಿಂಗ್ ಬೆಲ್‌ ಒತ್ತಿ ತಂದಿವೆ ಎಂದರೆ ನಿಮಗೆಲ್ಲ ಆಶ್ಚರ್ಯ ಅಲ್ಲವೆ.


ಹೌದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿಳಗಿ ಸಮೀಪದ ಕಬಗಾರ ಗ್ರಾಮದ. ಸುಸಂಸ್ಕೃತ, ಸೌಮ್ಯ ಸ್ವಭಾವದ ಚಿಕ್ಕ ರೈತ ಕುಟುಂಬದ ಸರೋಜಾ ಮತ್ತು ಕೆರಿಯಪ್ಪ ನಾಯ್ಕ ರವರ ಮೂವರು ಮಕ್ಕಳಲ್ಲಿ ಎರಡನೇ ಮಗ ರಾಜೇಶ ಕೆರಿಯ ನಾಯ್ಕ. ಈತ ಓದಿದ್ದು ತಾಲೂಕಿನ ಗ್ರಾಮೀಣ ಭಾಗದ ಹೊನ್ನಮಾವ್, ಹುಸೂರು ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಹೆಗ್ಗರಣಿ ಪ್ರೌಢಶಾಲೆಯಲ್ಲಿ ಸರಕಾರಿ ವಸತಿ ಶಾಲೆಯಲ್ಲಿದ್ದು ವ್ಯಾಸಂಗ ಮಾಡಿರುತ್ತಾರೆ. ನಂತರ ಸಾಗರದ ಸರಕಾರಿ ತಾಂತ್ರಿಕ ಕಾಲೇಜಿನಲ್ಲಿ ಮ್ಯಾಕಾನಿಕಲ್ ಡಿಪ್ಲೊಮಾ ಪದವಿ ಗಳಿಸಿದರೂ ಓದನ್ನು ಅಷ್ಟಕ್ಕೇ ನಿಲ್ಲಿಸದೇ ಬೆಂಗಳೂರಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್( ಬಿ.ಇ) ಪದವಿ ಪೂರೈಸಿದರು. ಇದರ ನಂತರ ಕೆಲವು ಕಂಪನಿ ಕೆಲಸ ಸಿಕ್ಕರೂ ಮನದಲ್ಲಿ ಬೇರೆಯದೇ ಯೋಜನೆ, ಯೋಚನೆ!. ಸರಕಾರಿ ನೌಕರಿ ಸೇರಬೇಕೆಂಬ ಉತ್ಕಟ ಬಯಕೆ. ಅದರಲ್ಲೂ ಕೇಂದ್ರ ಸರಕಾರದ ಉನ್ನತ ಹುದ್ದೆಗೇರಬೇಕೆಂಬ ತುಡಿತ. ಇದಕ್ಕಾಗಿ ಸಣ್ಣದು ದೊಡ್ಡದು ಎನ್ನದೇ ಎಲ್ಲೆಡೆ ಅರ್ಜಿ ಸಲ್ಲಿಸಿದರು.

ಮೊದಲು ನಮ್ಮ ಮಲೆನಾಡಿನ ಬಹುತೇಕ ಭಾಗದಲ್ಲಿ ಯಾರಿಗೂ ದಕ್ಕದ ರೇಲ್ವೆ ಡ್ರೈವರ್ (ಲೋಕೋ ಪೈಲಟ್’) ಹುದ್ದೆ ಸಿಕ್ಕಾಗ ಬಡತನದ ಸವಾಲು ಈಜುವಾಗ ಸಿಕ್ಕ ನಡುಗಡ್ಡೆಯೆಂದು ಸ್ವೀಕರಿಸಿದರು.ಅಲ್ಲಿ ಆರು ವರ್ಷಗಳ ಕಾಲ ದೇಶದ ಲಕ್ಷಾಂತರ ಜನರನ್ನು ಸುರಕ್ಷಿತವಾಗಿ ಊರು ತಲುಪಿಸಿದ್ದಾರೆ. ಕೈತುಂಬ ವೇತನವಿದ್ದರೂ ಹೆಚ್ಚಿನ ವ್ಯಾಸಂಗಕ್ಕೆ ಓದಲು ಸಮಯ ಸಿಗದಿರುವುದರಿಂದ ಲೋಕೋಪೈಲಟ್ ಹುದ್ದೆಗೆ ರಾಜಿನಾಮೆ ಸಲ್ಲಿಸಿ ಮನೆಗೆ ಮರಳಿದಾಗ ‘ಸಿಕ್ಕಿದ ನೌಕರಿ ಬಿಟ್ಟು ಮನೆ ಕಾಯಕ ಬಂದಿದ್ದಾನೆ’ ಎಂಬ ಮಾತಿಗೂ ಆಹಾರವಾದರು. ಅದಕ್ಕೆ ಕಿವಿಗೊಡದೇ ಅಧ್ಯಯನ ಮುಂದುವರಿಸಿದಾಗ ಕೇಂದ್ರ ಸರಕಾರದ ಪಾಸ್ ಪೋರ್ಟ್ ಕಛೇರಿಯಲ್ಲಿ ಉತ್ತಮ ಕೆಲಸ ಕೈ ಹಿಡಿದು ಕರೆದೊಯ್ತು. ಅದರಲ್ಲಿ ಕೆಲಸ ಮಾಡುತ್ತ ನಮ್ಮ ಭಾಗದ ನೂರಾರು ಜನರಿಗೆ ವಿದೇಶಕ್ಕೆ ತೆರಳಲು ಪಾಸ್ ಪೋರ್ಟ್ ಮಾಡಿಸಿಕೊಟ್ಟು ನಗುಮೊಗದಿ ಸೂಕ್ತ ಸಲಹೆ ಮಾರ್ಗದರ್ಶನ ಕೂಡ ಮಾಡಿ ಉತ್ತಮ ಕಾರ್ಯ ಬದ್ದತೆ ಮೆರೆದಿದ್ದಾರೆ.ಅದೇ ಸಮಯದಲ್ಲಿ ಕರ್ನಾಟಕ ಸರ್ಕಾರದ ಗ್ರಾಮಲೆಕ್ಕಾಧಿಕಾರಿ ಹುದ್ದೆಗೂ ಆಯ್ಕೆಯಾಗಿದ್ದರು. ಆದರೆ ಹಾಜರಾಗದೇ ಆಯ್ಕೆಪಟ್ಟಿಯಲ್ಲಿನ ಮುಂದಿನ ಯುವಕರಿಗೆ ಅನುಕೂಲವಾಗಲೆಂದು ಆಯ್ಕೆಯಿಂದ ಹಿಂದೆ ಸರಿದರು. ಈ ಮಧ್ಯೆ ಅವರ ದೂರದೃಷ್ಟಿ ಇನ್ನೂ ಉನ್ನತ ಮಟ್ಟದ ಹುದ್ದೆ ಮೇಲಿತ್ತು. ಅದಕ್ಕಾಗಿ ಪಾಸ್ ಪೋರ್ಟ ಇಲಾಖೆಯ ಕೆಲಸಕ್ಕೂ ರಾಜಿನಾಮೆ ನೀಡಿದರು.

ಇದಾದ ನಂತರ ಮನೆ ಸೇರಿದರೂ ಛಲ ಬಿಡದ ತ್ರಿವಿಕ್ರಮನಂತೆ ಸದಾಕಾಲ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ಮಾಡಿ ಇದೀಗ ಯಶವನ್ನೂ ಕಂಡಿದ್ದಾರೆ. ಇಂತಹ ‘ಸಾಧಕ ಯುವಕರಿಗೆ ಈ ಕಾಂಪಿಟೇಟಿವ್ ಪರೀಕ್ಷೆಯೊಂದು ಲೆಕ್ಕವೇ?’ ಎಂಬುದನ್ನು ಸಾಭೀತು ಪಡಿಸಿದ್ದಾರೆ. ಅದೇ ಕೇಂದ್ರ ಸರಕಾರದ ಪ್ರತಿಷ್ಠಿತ ಆದಾಯ ತೆರಿಗೆ (income tax) ಇಲಾಖೆಯ ‘ಕಛೇರಿ ಸುಪರಿಟೆಂಡೆಂಟ್( ಗ್ರುಪ್- ಬಿ’ ನಾನ್ ಗೆಜಿಟೆಡ್) ಹುದ್ದೆಗೆ ಆಯ್ಕೆಯಾಗಿದ್ದಾರೆ ಎನ್ನಲು ಹೆಮ್ಮೆಯಲ್ಲವೆ. ನಿಜವಾಗಿಯೂ ಈ ಯುವಕನ ಸಾಧನೆಯ ನಾಲ್ಕನೆಯ ಗೆಲುವಾಗಿದೆ. ಸಾಧನೆಗೆ ಯಾವುದೂ ಅಸಾಧ್ಯವಿಲ್ಲ ಎಂಬ ಮಾತನ್ನು ಇಂದಿನ ಯುವಕ/ ತಿಯರು ಸರಿಯಾಗಿ ಆಲಿಸಿ ಪ್ರಯತ್ನಿಸಬಹುದಲ್ಲವೆ?

ಅಂದಹಾಗೆ ಈ ರಾಜೇಶ ನಾಯ್ಕರ ಸಾಧನೆಗೆ ಸ್ಪೂರ್ತಿ ತಮ್ಮ ದೊಡ್ಡಪ್ಪ ಇತ್ತೀಚೆಗೆ ನಿಧನರಾದ ಚಂದ್ರಶೇಖರ ನಾಯ್ಕರ ಮೂರು ಗಂಡು ಮಕ್ಕಳು ತಮಗಿಂತಲೂ ಕಡು ಬಡತನದಲ್ಲಿದ್ದರೂ ಮೂರು ಜನ ಅಣ್ಣಂದಿರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಒಂದು ಸರಕಾರಿ ನೌಕರಿಗೆ ಆಯ್ಕೆಯಾಗಿದ್ದಾರೆ. ಅಣ್ಣಂದಿರ ಮಾರ್ಗದರ್ಶನದಲ್ಲೇ ಸಮಯವನ್ನು ಕಿಂಚಿತ್ತೂ ವ್ಯಯ ಮಾಡದೇ ನಿರಂತರ ಅಧ್ಯಯನ ಮಾಡಿ ಗೆಲವಿನ ಗೆರೆಯನ್ನು ದಾಟಿ ಇಂದು ಹೆತ್ತ ತಂದೆ ತಾಯಿ, ಊರು,ತಾಲೂಕು ಜಿಲ್ಲೆ, ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ.
ಇವರ ಸಾಧನೆ ಇಷ್ಟಕ್ಕೆ ನಿಲ್ಲದೇ ಮುಂದೆಯೂ ಕೂಡ ಐ.ಎ ಎಸ್. ನಂತಹ ಉನ್ನತೋನ್ನತ ಹುದ್ದೆಗಳ ಪರೀಕ್ಷೆಯಲ್ಲಿ ಗೆಲ್ಲೆಂಬುದು ನಮ್ಮ ನಿಮ್ಮೆಲ್ಲರ ಹಾರೈಕೆ.
ಗೋಪಾಲ ಭಾಶಿ. ಸಿದ್ದಾಪುರ
ಶಿಕ್ಷಕರು.

About the author

Adyot

Leave a Comment