ಸಿದ್ದಾಪುರ:ಶ್ರೀಕ್ಷೇತ್ರ ಭುವನಗಿರಿಯಲ್ಲಿ ಸಂಪೂರ್ಣ ಶ್ರೀಮದ್ಭಗವದ್ಗೀತಾ ಪಾರಾಯಣ

ಆದ್ಯೊತ್ ಸುದ್ದಿನಿಧಿ:
ಸಿದ್ದಾಪುರ ತಾಲೂಕಿನ ಶ್ರೀಕ್ಷೇತ್ರ ಭುವನಗಿರಿಯ ಶ್ರೀಭುವನೇಶ್ವರಿ ದೇವಾಲಯದಲ್ಲಿ ಸ್ಥಳೀಯ ಸುಷಿರ ಸಂಗೀತ ಪರಿವಾರ (ರಿ) ಹಾಗೂ ದೇವಾಲಯದ ಆಡಳಿತ ಸಮಿತಿಯವರ ಸಹಯೋಗದಲ್ಲಿ ಸಂಪೂರ್ಣ ಶ್ರೀಮದ್ಭಗವದ್ಗೀತಾ ಪಾರಾಯಣ ಕಾರ್ಯಕ್ರಮ ರವಿವಾರ ನಡೆಯಿತು.


ಕಾರ್ಯಕ್ರಮದಲ್ಲಿ ಶಿರಳಗಿಯ ಶ್ರೀಚೈತನ್ಯ ರಾಜಾರಾಮ ಕ್ಷೇತ್ರದ ಶ್ರೀಬ್ರಹ್ಮಾನಂದಭಾರತೀ ಸ್ವಾಮೀಜಿ ದಿವ್ಯೋಪದೇಶ ನೀಡಿದರು.
ನಿತ್ಯ ಜೀವನದಲ್ಲಿ ಆಧ್ಯಾತ್ಮವನ್ನು ಅಳವಡಿಸಿಕೊಂಡು ಹೋಗುವುದು ಹೇಗೆ ಎಂಬ ವಿಚಾರ ಭಗವದ್ಗೀತೆಯಲ್ಲಿದೆ. ಸಾಧನೆಯ ಪಥದಲ್ಲಿ ಸಾಗಲು ಭಗವದ್ಗೀತೆಯ ಪಠಣ ಮಾಡಬೇಕು. ಭಗವದ್ಗೀತೆಯಲ್ಲಿ ಭಗವಂತನ ಮಹಿಮೆ ತುಂಬಿದ್ದು ಇದನ್ನು ಪಠಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ. ರಾಗ, ದ್ವೇಷ, ಮೋಹ, ಶೋಕವನ್ನೊಳಗೊಂಡ ಜೀವನದಲ್ಲಿ ಹೋರಾಟ, ದು:ಖ, ಬೇಸರ ಅನುಭವಿಸುವವರಿಗೆ ಭಗವದ್ಗೀತೆ ದಿವ್ಯ ಔಷಧವಾಗಿದೆ. ಜೀವನವನ್ನು ಅರ್ಥೈಸಿಕೊಳ್ಳದಿರುವುದು ಹಾಗೂ ನಮ್ಮಲ್ಲಿಯ ಅವಿವೇಕ ದು:ಖಕ್ಕೆ ಕಾರಣವಾಗುತ್ತದೆ. ಮನಸ್ಸಿನ ಸಮಾಧಾನ ಕಳೆದುಕೊಳ್ಳಬಾರದು. ಬರುವುದೆಲ್ಲವೂ ಭಗವಂತನ ಪ್ರಸಾದವೆಂದು ಸ್ವೀಕರಿಸಬೇಕು.

ಭಗವದ್ಗೀತೆ ಎಲ್ಲರಿಗೂ ಹೇಳಿಕೊಡಬಹುದಾದ ವೇದಸಾರ. ಮಡಿ, ಮೈಲಿಗೆ, ಜಾತಿ, ಧರ್ಮವೆಂಬ ಬೇಧಭಾವ ಭಗವದ್ಗೀತೆಗಿಲ್ಲ. ಹೀಗಾಗಿ ಭಗವದ್ಗೀತೆಯನ್ನು ಮನೆಮನೆಗೂ ತಲುಪಿಸುವ ಕೆಲಸವಾಗಬೇಕು ಎಂದು ಹೇಳಿದರು.


ನೂರಾರು ಮಹಿಳೆಯರು ಸಂಪೂರ್ಣ ಶ್ರೀಮದ್ಭಗವದ್ಗೀತಾ ಪಾರಾಯಣ ನಡೆಸಿಕೊಟ್ಟರು. ಶ್ರೀ ಭುವನೆಶ್ವರೀ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಾಳದಕಟ್ಟಾದ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆಯ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು. ವೇ.ಶ್ರೀಧರ ಭಟ್ಟ ಮುತ್ತಿಗೆ ಶ್ರೀಕೃಷ್ಣನ ಪೂಜಾಕಾರ್ಯ ನೆರವೇರಿಸಿದರು. ಸುಷಿರ ಸಂಗೀತ ಪರಿವಾರದ ನಾರಾಯಣ ಕಲ್ಲಾರೆಮನೆ ಪ್ರಾಸ್ತಾವಿಕ ಮಾತನಾಡಿದರು. ಮಧುಮತಿ ಶಿರಳಗಿ ಭಗವದ್ಗೀತಾ ಪಠಣ ಕಾರ್ಯಕ್ರಮ ಸಂಘಟನೆಯ ಕುರಿತು ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿ, ವಂದಿಸಿದರು.

About the author

Adyot

Leave a Comment