ಮಹಾತ್ಮಾ ಗಾಂಧೀಜಿ ನನಗೆ ಪ್ರೇರಣೆ, ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು : ರವಿಕೃಷ್ಣಾ ರೆಡ್ಡಿ

ಸ್ವಚ್ಛ, ಪ್ರಾಮಾಣಿಕ, ಪಾರದರ್ಶಕ ರಾಜಕಾರಣದ ಉದ್ದೇಶದಿಂದ ಸ್ಥಾಪಿತವಾಗಿರುವ ಕರ್ನಾಟಕ ರಾಷ್ಟಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿಯವರ ಜೊತೆ ಆದ್ಯೋತ ನ್ಯೂಸ್ ಸಂದರ್ಶನ –

ಆದ್ಯೋತ ನ್ಯೂಸ್: ರವಿಕೃಷ್ಣಾರೆಡ್ಡಿಯವರು ಅಮೇರಿಕಾದಲ್ಲಿ ಕೈತುಂಬಾ ಸಂಬಳ ಬರುವ ಕೆಲಸದಲ್ಲಿದ್ದವರು. ಅಂತಹವರು ಕೆಲಸ ಬಿಟ್ಟು ಭ್ರಷ್ಟಾಚಾರದ ವಿರುದ್ದ ಹೋರಾಟಕ್ಕೆ ಧುಮುಕುವುದರ ಜೊತೆಗೆ ಚುನಾವಣಾ ರಾಜಕೀಯಕ್ಕೆ ಇಳಿದಿರುವ ಉದ್ದೇಶ ಏನು?
ರವಿಕೃಷ್ಣಾರೆಡ್ಡಿ: ನಾನು ಬೆಂಗಳೂರು ಸಮೀಪದ ಊರಿನವನು. ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತವನು. ಹೀಗಾಗಿ ಬಾಲ್ಯದಿಂದಲೂ ಸಾಹಿತ್ಯದ ಬಗ್ಗೆ ಆಸಕ್ತಿ ಇತ್ತು. ಲಂಕೇಶ ಪತ್ರಿಕೆಯಂತಹ ಪತ್ರಿಕೆಯನ್ನು ಓದುತ್ತಿದ್ದುದರಿಂದ ವ್ಯವಸ್ಥೆಯ ಬಗ್ಗೆ ಒಂದು ಅಸಹನೆ ಮತ್ತು ಹೋರಾಟ ಮನೋಭಾವನೆ ಇತ್ತು. ಮುಂದೆ ಉದ್ಯೋಗಕ್ಕಾಗಿ ಅಮೇರಿಕಾಕ್ಕೆ ಹೋದೆ. ಅಲ್ಲಿ ಹಲವಾರು ಸಂಘಟನೆಯಲ್ಲಿ ಸಕ್ರೀಯವಾಗಿದ್ದೆ. ಹಲವಾರು ಪತ್ರಿಕೆಗಳಿಗೆ ಲೇಖನ ಬರೆಯುತ್ತಿದ್ದೆ. ಮುಂದೆ ಅದರ ಸಂಗ್ರಹದ ಪುಸ್ತಕವನ್ನೂ ಹೊರತಂದೆ. ಇದರ ಜೊತೆಗೆ ವಿಕ್ರಾಂತ ಕರ್ನಾಟಕ ಎಂಬ ಪತ್ರಿಕೆಯನ್ನು ಮೂರು ವರ್ಷಗಳ ಕಾಲ ನಡೆಸಿದೆ. ಹೀಗೆ ನಿರಂತರ ಹೋರಾಟವನ್ನು ಮಾಡುತ್ತಾ ಬಂದೆ.


ಆದ್ಯೋತ ನ್ಯೂಸ್: ಚುನಾವಣಾ ರಾಜಕೀಯಕ್ಕೆ ಬಂದ ಉದ್ದೇಶ?
ರವಿಕೃಷ್ಣಾರೆಡ್ಡಿ : ಸಾಹಿತ್ಯದ ಮೂಲಕ, ಪತ್ರಿಕೆಯ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದೆ. 2008ರ ಚುನಾವಣೆಯಲ್ಲಿ ಅಮೇರಿಕದಿಂದ ಇಲ್ಲಿಗೆ ಬಂದು ಜಯನಗರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ನಿಂತೆ. ಹಣ ಖರ್ಚು ಮಾಡಿ ಚುನಾವಣೆ ನಡೆಸುವುದಿಲ್ಲ ಎಂಬ ಮೌಲ್ಯವನ್ನಿಟ್ಟುಕೊಂಡು ಮೂರು ದಿನ ಉಪವಾಸ ಸತ್ಯಾಗ್ರಹ ನಡೆಸಿ ಒಂದು ನೋಟು ಒಂದು ಓಟು ಎಂಬ ಘೋಷಣೆಯೊಂದಿಗೆ ಚುನಾವಣೆ ಎದುರಿಸಿದೆ.


ಆದ್ಯೋತ ನ್ಯೂಸ್: ನಿಮಗೆ ಈ ಎಲ್ಲಾ ಹೋರಾಟಕ್ಕೆ ಪ್ರೇರಣೆ ಏನು?
ರವಿಕೃಷ್ಣಾರೆಡ್ಡಿ: ಮಹಾತ್ಮಾ ಗಾಂಧೀಜಿಯೇ ನನಗೆ ಪ್ರೇರಣೆ. ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂಬ ಉದ್ದೇಶದಿಂದಲೇ ಚುನಾವಣೆ ರಾಜಕೀಯಕ್ಕೆ ಬಂದವನು ನಾನು. 2011ರಲ್ಲಿ ನನ್ನ ಕೆಲಸಕ್ಕೆ ರಾಜಿನಾಮೆ ನೀಡಿ ಇಲ್ಲೇ ನೆಲೆಸಲು ನಿಶ್ಚಯಿಸಿದೆ. 2014ರಲ್ಲಿ ದೊರೆಸ್ವಾಮಿಯವರ ಜೊತೆ ಸೇರಿ ಹೋರಾಟ ನಡೆಸಿದೆ. ಸಾಕಷ್ಟು ಭ್ರಷ್ಟರು ಕಾನೂನಿನ ಕುಣಿಕೆಗೆ ಸಿಗುವಂತೆ ಮಾಡಿದೆ.


ಆದ್ಯೋತ ನ್ಯೂಸ್: ಪಕ್ಷ ಸ್ಥಾಪನೆ ಮಾಡಿದ್ದು?
ರವಿಕೃಷ್ಣಾರೆಡ್ಡಿ: ನಾನು ಆಮ್ ಆದ್ಮಿ ಪಕ್ಷವನ್ನು ಸೇರಿದ್ದೆ. ಯಾಕೋ ಅಲ್ಲಿ ಸರಿ ಬರಲಿಲ್ಲ. ಆದ್ದರಿಂದ ಸ್ವಚ್ಛ, ಪ್ರಾಮಾಣಿಕ, ಪಾರದರ್ಶಕ ದ್ಯೇಯೋದ್ದೇಶದೊಂದಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಸ್ಥಾಪಿಸಲಾಗಿದೆ. ಪಕ್ಷ ಸ್ಥಾಪಿಸಿದ ಕೆಲವೇ ದಿನಗಳಲ್ಲಿ ನಡೆದ ಉಪಚುನಾವಣೆಯಲ್ಲಿ ಒಂಬತ್ತು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೇವೆ. 6 ತಿಂಗಳಲ್ಲಿ ಜಿಲ್ಲಾ ಸಮಿತಿಗಳನ್ನು ರಚಿಸಿದ್ದೇವೆ. ಉತ್ತಮ, ಪ್ರಾಮಾಣಿಕ ನಾಯಕತ್ವವನ್ನು ಬೆಳೆಸಲು ಪ್ರತೀ ಜಿಲ್ಲೆಯಲ್ಲಿ ನಾಯಕತ್ವ ಶಿಬಿರವನ್ನು ನಡೆಸಲಾಗುತ್ತಿದೆ‌.


ಆದ್ಯೋತ ನ್ಯೂಸ್: ರಾಜ್ಯದಲ್ಲಿ ಹಲವಾರು ಸಮಸ್ಯೆಗಳಿವೆ. ಆದರೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಕೇವಲ ಭ್ರಷ್ಟಾಚಾರವನ್ನು ಇಟ್ಟುಕೊಂಡು ಜನರ ಹತ್ತಿರ ಹೋಗುತ್ತಿದೆ. ಇದರಿಂದ ಪಕ್ಷ ಬೆಳವಣಿಗೆ ಸಾಧ್ಯವೇ?
ರವಿಕೃಷ್ಣಾರೆಡ್ಡಿ: ರಾಜ್ಯದ ಬೇರೆ ಬೇರೆ ಜಿಲ್ಲೆಯಲ್ಲಿ ಬೇರೆ ಬೇರೆ ಸಮಸ್ಯೆ ಇದೆ. ಅಲ್ಲಿಯ ಸಮಸ್ಯೆ ಬಗ್ಗೆ ಹೋರಾಟ ನಡೆಸುವ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ರಾಜ್ಯ ಸಮಿತಿ ಇಂತಹ ಹೋರಾಟಕ್ಕೆ ಬೆಂಬಲ, ಮಾರ್ಗದರ್ಶನ ನೀಡುತ್ತದೆ. ಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಹಾಕಲಿದ್ದೇವೆ. ಅಲ್ಲದೆ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುತ್ತೇವೆ. ಮಹಾನಗರ ಪಾಲಿಕೆ ಚುನಾವಣೆಯಲ್ಲೂ ನಾವು ಸ್ಪರ್ಧಿಸುತ್ತೇವೆ.
2023ರಲ್ಲಿ ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 224 ಕ್ಷೇತ್ರದಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ನಮ್ಮ ಪಕ್ಷದ ಬೆಂಬಲವಿಲ್ಲದೆ ಮುಂದಿನ ಸರಕಾರ ನಡೆಯುವುದಿಲ್ಲ.
***** ***** ***** *****
ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಸಮಸ್ಯೆ ಬಗ್ಗೆ ಧ್ವನಿ ಎತ್ತಲು ಪ್ರಾದೇಶಿಕ ಪಕ್ಷದ ಅವಶ್ಯಕತೆ ಇರುತ್ತದೆ. ತತ್ವ ಸಿದ್ದಾಂತದ ಆಧಾರದಲ್ಲೆ ಚುನಾವಣೆ ರಾಜಕೀಯ ಮಾಡಬೇಕು. ವಿಧಾನಸಭಾಧ್ಯಕ್ಷರು ಅಧಿವೇಶನಕ್ಕೆ ಹಾಗೂ ಶಾಸಕರ ಭವನಕ್ಕೆ ಮಾಧ್ಯಮದವರನ್ನು ನಿಷೇಧಿಸಿರುವುದು ಸರಿಯಾದ ಕ್ರಮವಲ್ಲ. ಇದನ್ನು ಕಾಂಗ್ರೇಸ್ ಹಾಗೂ ಜೆಡಿಎಸ್ ಪಕ್ಷದವರು ವಿರೋಧಿಸಬೇಕಿತ್ತು. ಆಶ್ಚರ್ಯವೆಂದರೆ ಮಾಧ್ಯಮದವರು ಈ ಬಗ್ಗೆ ಧ್ವನಿ ಎತ್ತದೆ ಇರುವುದು – ರವಿಕೃಷ್ಣಾ ರೆಡ್ಡಿ.

About the author

Adyot

Leave a Comment